ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ನಾಗಮಂಗಲ ತಾಲೂಕಿನಲ್ಲಿ ನಿಯಮಗಳನ್ನು ಉಲ್ಲಂಘಿಸಿ 691 ಪ್ರಕರಣಗಳಲ್ಲಿ ಸಾಗುವಳಿ ಚೀಟಿ ಮಂಜೂರು ಮಾಡಿರುವ ಅಕ್ರಮ ನಡೆದಿದ್ದು, ತನಿಖೆಯಲ್ಲಿ ಇದು ದೃಢಪಟ್ಟಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಉಪ್ಪಾರಹಳ್ಳಿ ಗ್ರಾಮದ ಆಂಜನೇಯ ದೇವಾಲಯದ ನೆಲದ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಗುವಳಿ ಚೀಟಿ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರ ಹಾಗೂ ಅದರ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಚುನಾವಣೆಗೆ ಮುನ್ನ ನಡೆದ ಸಾಗುವಳಿ ಚೀಟಿ ಅಕ್ರಮದ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ಬಳಿಕ ಸರ್ಕಾರದ ಸೂಚನೆಯಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಅಂದಿನ ಎಡಿಸಿ ನಿಶ್ಚಲಾನಂದ ಸ್ವಾಮೀಜಿ ಅವರ ನೇತೃತ್ವದ ತನಿಖೆಯಲ್ಲಿ ಅಕ್ರಮಗಳು ಪತ್ತೆಯಾಗಿವೆ. ಕಡತದಲ್ಲಿಯೂ ಈ ಕುರಿತು ಸ್ಪಷ್ಟವಾಗಿ ಷರಾ ಬರೆಯಲಾಗಿದೆ ಎಂದು ಸಚಿವರು ತಿಳಿಸಿದರು.

ಸರ್ಕಾರದ ನಿಯಮಗಳ ಪ್ರಕಾರ ಗರಿಷ್ಠ 4 ಎಕರೆ 38 ಗುಂಟೆ ಜಮೀನು ಹೊಂದಿರುವವರಿಗೆ ಮಾತ್ರ ಸಾಗುವಳಿ ಚೀಟಿ ನೀಡಲು ಅವಕಾಶವಿದೆ. ಆದರೆ, 5 ಎಕರೆ ಜಮೀನು ಹೊಂದಿದ್ದವರಿಗೂ ಚೀಟಿ ನೀಡಲಾಗಿದೆ. ಅರ್ಜಿ ಸಲ್ಲಿಸಿದವರು ಒಬ್ಬರಾಗಿದ್ದರೆ, ಚೀಟಿ ಪಡೆದವರು ಮತ್ತೊಬ್ಬರಾಗಿರುವ ಪ್ರಕರಣಗಳಿವೆ. ಕೆಲವು ಪ್ರಕರಣಗಳಲ್ಲಿ ಅರ್ಜಿ ಸಲ್ಲಿಸದವರಿಗೂ ಸಾಗುವಳಿ ಚೀಟಿ ನೀಡಲಾಗಿದೆ. ಹಲವು ದಾಖಲೆಗಳಲ್ಲಿ ತಹಸೀಲ್ದಾರ್ ಹಾಗೂ ಸಾಗುವಳಿ ಸಮಿತಿ ಅಧ್ಯಕ್ಷರ ಸಹಿಯೇ ಇಲ್ಲದೆ ಚೀಟಿ ವಿತರಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
38 ಪ್ರಕರಣಗಳು ವಜಾ
ಒಮ್ಮೆ ಸಾಗುವಳಿ ಚೀಟಿ ಮಂಜೂರಾದ ಬಳಿಕ ಅದನ್ನು ರದ್ದುಪಡಿಸುವ ಅಧಿಕಾರ ಉಪ ವಿಭಾಗಾಧಿಕಾರಿ (ಎಸಿ) ಅವರಿಗೆ ಮಾತ್ರ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ 38 ಅಕ್ರಮ ಪ್ರಕರಣಗಳನ್ನು ಎಸಿ ಅವರು ವಜಾಗೊಳಿಸಿದ್ದಾರೆ. ಉಳಿದ ಪ್ರಕರಣಗಳನ್ನು ಪರಿಶೀಲನೆಗಾಗಿ ಸಮಿತಿಯ ಮುಂದೆ ಇಡಲಾಗಿದೆ ಎಂದು ಚಲುವರಾಯಸ್ವಾಮಿ ಹೇಳಿದರು.
ಅರ್ಹರಿಗೆ ಯಾವುದೇ ಪಕ್ಷಭೇದವಿಲ್ಲ
ಕಾನೂನುಬದ್ಧವಾಗಿ ಅರ್ಹತೆ ಹೊಂದಿದ್ದರೂ ಕೇವಲ ತಾಂತ್ರಿಕ ಅಥವಾ ಪ್ರಕ್ರಿಯಾತ್ಮಕ ಲೋಪದಿಂದ ಸಾಗುವಳಿ ಚೀಟಿ ತಡೆಹಿಡಿಯಲ್ಪಟ್ಟಿರುವ ರೈತರಿಗೆ ಯಾವುದೇ ಪಕ್ಷಭೇದವಿಲ್ಲದೆ ಚೀಟಿ ಮಂಜೂರು ಮಾಡಲಾಗುವುದು. ಆದರೆ ಕಾನೂನುಬಾಹಿರವಾಗಿ ಪಡೆದಿರುವ ಸಾಗುವಳಿ ಚೀಟಿಗಳಿಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಹಿಂದೆ ತಂತ್ರಾಂಶದ ಲೋಪಗಳನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಗಲಾಗಿದೆ. ಪ್ರಸ್ತುತ ಸರ್ಕಾರ ರೂಪಿಸಿರುವ ಹೊಸ ತಂತ್ರಾಂಶದಲ್ಲಿ ಇಂತಹ ಅಕ್ರಮಗಳಿಗೆ ಅವಕಾಶವಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.

