ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ದೆಹಲಿಗೆ ತೆರಳಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ಮರಳಿದ ಬಳಿಕ, ಶನಿವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಈ ಕುರಿತು ಕಾರ್ಯದರ್ಶಿ ಅಲ್ಲಮ ಪ್ರಭು ಪ್ರಕಟಣೆ ಹೊರಡಿಸಿದ್ದು, ದೆಹಲಿಯಲ್ಲಿ ಇರುವ ಎಲ್ಲಾ ಶಾಸಕರಿಗೂ ತಕ್ಷಣ ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಲಾಗಿದೆ. ಸಭೆಗೆ ಸಂಬಂಧಿಸಿದ ಗೊಂದಲಗಳಿಗೆ ತೆರೆ ಬಿದ್ದಿದ್ದು, ಕೆಪಿಸಿಸಿ ಕಚೇರಿಯಿಂದ ಎಲ್ಲಾ ಶಾಸಕರಿಗೂ ಬೆಂಗಳೂರಿನಲ್ಲೇ ಇರುವಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.
ಸಿಎಲ್‌ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಹೈಕಮಾಂಡ್‌ನ ಅಂತಿಮ ತೀರ್ಮಾನವೇ ಸಭೆಯಲ್ಲಿ ಘೋಷಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿಂದೆ ನಡೆದಂತೆ ಚುನಾವಣೆಯ ಬದಲು ನೇರ ಘೋಷಣೆಯೇ ನಡೆಯಬಹುದು ಎನ್ನಲಾಗುತ್ತಿದೆ.
ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಹಾಗೂ ಕೆ.ಸಿ. ವೇಣುಗೋಪಾಲ್ ಭಾಗವಹಿಸಲಿದ್ದು, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲಕ್ಕೆ ಇದೇ ಸಭೆಯಲ್ಲಿ ತೆರೆ ಬೀಳುವ ಸಾಧ್ಯತೆ ಇದೆ.
ಇದಲ್ಲದೆ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಬಳಿಕ ಮುಂದಿನ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭದ ದಿನಾಂಕವೂ ಘೋಷಣೆಯಾಗುವ ಸಾಧ್ಯತೆ ಇದೆ.

