ಸ್ಪೇನ್‌ ರೈಲು ಅಪಘಾತಕ್ಕೆ68 ಮಂದಿ ಬಳಿ; ಎರಡು ಹೈಸ್ಪೀಡ್ ರೈಲುಗಳು ಒಂದೇ ಹಳಿಗೆ ಬಂದಿದ್ದೇ ಎಡವಟ್ಟು

ಮ್ಯಾಡ್ರಿಡ್: ಸ್ಪೇನ್‌ನಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ 68 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮಧ್ಯ ಸ್ಪೇನ್‌ನ ಟೊಲೆಡೊ ಪ್ರಾಂತ್ಯದ ಮ್ಯಾಡ್ರಿಡ್–ಸೆವಿಲ್ಲೆ ರೈಲು ಮಾರ್ಗದಲ್ಲಿ ಈ ದುರಂತ ಸಂಭವಿಸಿದೆ. ಅಪಘಾತದ ಬೆನ್ನಲ್ಲೇ ದೇಶದಲ್ಲಿ ಮೂರು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ.

ಸ್ಥಗಿತಗೊಂಡಿದ್ದ ಇರ್ಯೊ (Iryo) ರೈಲಿನ ಹಿಂಭಾಗಕ್ಕೆ ರೆನ್ಫೆ (Renfe) ರೈಲು ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿಗಳು ತಿಳಿಸಿವೆ. ಅಪಘಾತದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಎರಡು ಹೈಸ್ಪೀಡ್ ರೈಲುಗಳು ಒಂದೇ ಹಳಿ ವಿಭಾಗಕ್ಕೆ ಹೇಗೆ ಬಂದವು ಎಂಬ ಪ್ರಶ್ನೆ ತನಿಖೆಯ ಪ್ರಮುಖ ಅಂಶವಾಗಿದೆ.

ರೈಲು ದುರಂತದ ಕುರಿತು ಸಮಗ್ರ ನ್ಯಾಯಾಂಗ ಮತ್ತು ತಾಂತ್ರಿಕ ತನಿಖೆ ನಡೆಸಲು ಅಧಿಕಾರಿಗಳು ಆದೇಶಿಸಿದ್ದಾರೆ. ರೈಲುಗಳ ಚಲನೆಯ ನಿಯಂತ್ರಣ, ಸಿಗ್ನಲಿಂಗ್ ವ್ಯವಸ್ಥೆ, ಹಳಿಗಳ ಸ್ಥಿತಿ ಹಾಗೂ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದವೇ ಎಂಬುದರ ಕುರಿತು ಪರಿಶೀಲನೆ ನಡೆಯಲಿದೆ.

ಮಾನವ ತಪ್ಪು ಅಥವಾ ಸುರಕ್ಷತಾ ಲೋಪ ಕಂಡುಬಂದರೆ ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ಪೆಡ್ರೊ ಸಾಂಚೆಜ್ ತಿಳಿಸಿದ್ದಾರೆ.

ಅಪಘಾತದ ಬಳಿಕ ತುರ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸುವ ಕಾರ್ಯಾಚರಣೆ ಕೈಗೊಂಡಿವೆ. ಗಾಯಗೊಂಡವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಸಂತ್ರಸ್ತರ ಕುಟುಂಬಗಳಿಗೆ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

Related posts