ನವದೆಹಲಿ: ನವರಾತ್ರಿ, ದಸರಾ ಹಾಗೂ ದೀಪಾವಳಿ ಹಬ್ಬಗಳ ಸರಣಿ ಆರಂಭವಾಗುತ್ತಿರುವ ಬೆನ್ನಲ್ಲೇ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ದರವನ್ನು ₹62.50ರಷ್ಟು ಹೆಚ್ಚಿಸಿವೆ.
ಅಕ್ಟೋಬರ್ 1ರಿಂದ ಪರಿಷ್ಕೃತ ದರ ಜಾರಿಗೆ ಬಂದಿದ್ದು, ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ ₹2,747.50ರಿಂದ ₹2,810ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ನಲ್ಲಿ ₹9.50ರಷ್ಟು ಹೆಚ್ಚಳವಾಗಿದ್ದ ಬೆಲೆ, ಇದೀಗ ಮತ್ತೆ ಏರಿಕೆಯಾಗಿದೆ.
ಹಬ್ಬದ ಸಂದರ್ಭದಲ್ಲಿ ಹೋಟೆಲ್, ರೆಸ್ಟೋರೆಂಟ್, ಬೇಕರಿ ಹಾಗೂ ಬೀದಿಬದಿ ಆಹಾರ ಮಳಿಗೆಗಳಲ್ಲಿ ವಾಣಿಜ್ಯ ಸಿಲಿಂಡರ್ ಬಳಕೆ ಹೆಚ್ಚಾಗುವುದರಿಂದ, ದರ ಏರಿಕೆ ಸಣ್ಣ ವ್ಯಾಪಾರಗಳ ಮೇಲೂ ಹೆಚ್ಚುವರಿ ವೆಚ್ಚದ ಒತ್ತಡ ತರಬಹುದು.

ಗೃಹಬಳಕೆಯ ಸಿಲಿಂಡರ್ ದರ ಯಥಾಸ್ಥಿತಿ
ಇನ್ನೊಂದೆಡೆ, ಸಾಮಾನ್ಯ ಕುಟುಂಬಗಳು ಬಳಸುವ 14.2 ಕೆಜಿ ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇದೇ ವೇಳೆ, ಎಲ್ಪಿಜಿ ಸಬ್ಸಿಡಿ ಪಡೆಯುವ ಗ್ರಾಹಕರಿಗೆ ಬಯೋಮೆಟ್ರಿಕ್ ಪರಿಶೀಲನೆ ಸೇರಿದಂತೆ ಕೆಲವು ನಿಯಮಗಳು ಜಾರಿಗೆ ಬಂದಿವೆ ಎಂದು ವರದಿಯಾಗಿದೆ.

