ಒಳಮೀಸಲಾತಿ ಜಾರಿ ಬಗ್ಗೆ ನಿಲುವನ್ನು ಸ್ಪಷ್ಟಪಡಿಸಬೇಕು; ಸರ್ಕಾರಕ್ಕೆ ಹೆಚ್ಡಿಕೆ ಆಗ್ರಹ

ಒಳಮೀಸಲಾತಿ “ಸರ್ವರಿಗೂ ಸಮಪಾಲು ಸಮಬಾಳು” ಎಂಬ ಸಂವಿಧಾನಿಕ ಮೂಲ ಧಾತುವೇ ಆಗಿದ್ದು, ಅದನ್ನು ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾರಿಗೊಳಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ತುಳಿತಕ್ಕೊಳಗಾದ ಎಲ್ಲಾ ಜಾತಿಗಳಿಗೂ ಮೀಸಲಾತಿಯ ಫಲ ದಕ್ಕಬೇಕು ಎಂಬ ಸುಪ್ರೀಂ ಕೋರ್ಟ್’ನ ಆಶಯ ಒಳಮೀಸಲಾತಿಯ ಪರವಾದ ನಿಲುವೇ ಆಗಿದ್ದು, ಅದನ್ನು ಜಾರಿಗೊಳಿಸುವುದು ಸಾಮಾಜಿಕ ನ್ಯಾಯದ ಪರಿಪಾಲನೆಯ ಕರ್ತವ್ಯವಾಗುತ್ತದೆ ಎಂದು ಹೇಳಿದ್ದಾರೆ.

ಮೇಲ್ಜಾತಿಯಲ್ಲಿನ ಬಡವರಿಗೆ ಶೇ. 10 ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಕೇಂದ್ರದ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳಲ್ಲಿನ ಅವಕಾಶವಂಚಿತರಿಗೆ ಒಳಮೀಸಲಾತಿ ಜಾರಿಗೆ ತರಬಾರದೇಕೆ?

ಸ್ವತಃ ಹಿಂದುಳಿದವರ್ಗದವರೇ ಆಗಿರುವ ಪ್ರಧಾನಿಗಳು ಸಾಮಾಜಿಕ ನ್ಯಾಯವನ್ನು ಅನುಷ್ಠಾನಗೊಳಿಸುವ ಮೂಲಕ ಸಮಬಾಳು-ಸಮಪಾಲು ಎಂಬ ತತ್ವವನ್ನು ಎತ್ತಿಹಿಡಿಯಬೇಕಾಗಿದೆ. ಶೋಷಿತ ವರ್ಗದಲ್ಲೂ ಸ್ಪೃಶ್ಯ ಸಮುದಾಯ ಅಸ್ಪೃಶ್ಯರನ್ನು ಹತ್ತಿರ ಬಿಟ್ಟು ಕೊಳ್ಳದ ಪರಿಸ್ಥಿತಿ ಈಗಲೂ ಇದೆ.

ಪರಿಶಿಷ್ಟಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಒಳಮೀಸಲಾತಿ ವಿಚಾರದಲ್ಲಿ ತುಟಿಗೆ ತುಪ್ಪ ಸವರುವ ನೀತಿಗಳನ್ನು ಸರ್ಕಾರಗಳು ಇನ್ನಾದರೂ ಬಿಡಬೇಕು.

ಅಂಕ ಕಂಡಾ, ಕೋಲಾಸೆ ಮತ್ತೇಕಯ್ಯಾ
ಲೆಂಕ ಕಂಡಾ, ಪ್ರಾಣದಾಸೆ ಮತ್ತೇಕಯ್ಯಾ
ಭಕ್ತ ಕಂಡಾ, ತನುಮನಧನದಾಸೆ ಮತ್ತೇಕಯ್ಯಾ
ನಿಮ್ಮ ಅಂಕೆಗೆ ಝಂಕೆಗೆ ಶಂಕಿತನಾದೆಡೆ ಎನ್ನ ಲೆಂಕತನಕ್ಕೆ ಹಾನಿ ಕೂಡಲಸಂಗಮದೇವಾ

Related posts