ಬಿಜೆಪಿ ಭದ್ರಕೋಟೆಗೆ ಕಾಂಗ್ರೆಸ್ ಲಗ್ಗೆ; ಕರಾವಳಿಯಲ್ಲಿ ಶಕ್ತಿಪ್ರದರ್ಶನ

ಮಂಗಳೂರು: ಬಿಜೆಪಿ ಭದ್ರಕೋಟೆ ಕರಾವಳಿ ಜಿಲ್ಕೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿದೆ. ಮಂಗಳೂರಿನಲ್ಲಿ ವಾರಾಂತ್ಯದ ದಿನ ನಡೆದ ಸಮಾವೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು.

ಪ್ರಜಾಧ್ವನಿ ಯಾತ್ರೆಯನ್ನು ಕರಾವಳಿಗೆ ಕೊಂಡೊಯ್ದ ಕಾಂಗ್ರೆಸ್ ನಾಯಕರು ಮಂಗಳೂರು ಸುತ್ತಮುತ್ತಲ ರಾಜಕೀಯ ಲೆಕ್ಕಾಚಾರಗಳಿಗೆ ರೋಚಕತೆ ತುಂಬಿದರು. ಕರಾವಳಿಯಲ್ಲಿ ಆರೆಸ್ಸೆಸ್-ಬಿಜೆಪಿ ಕಾರ್ಯಕ್ರಮಗಳಿಗೆ ಜನಸಾಗರವೇ ಹರಿದುಬರುವುದು ಸಹಜ. ಭಾನುವಾರ ನಡೆದ ಕಾಂಗ್ರೆಸ್ ಸಮಾವೇಶವೂ ಎಂದಿಲ್ಲದ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಕರಾವಳಿಯ ಮುತ್ಸದ್ದಿ ನಾಯಕ ಜನಾರ್ದನ ಪೂಜಾರಿಯವರು ಈ ಸಮಾವೇಶದಲ್ಲಿ ಎಲ್ಲರ ಕುತೂಹಲದ ಕೇಂದ್ರಬಿಂದುವಾದರು.

ಮಂಗಳೂರಿನ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಭಾಗಿಯಾದರು.

ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್, ರಾಜ್ಯಸಭೆ ಸದಸ್ಯ ಜಿ ಸಿ ಚಂದ್ರಶೇಖರ್, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮದ್ ಹ್ಯಾರಿಸ್ ನಲಾಪಾಡ್, ಮುಖಂಡರಾದ ರೋಜಿ ಜಾನ್, ಪುಷ್ಪ ಅಮರನಾಥ್, ಯು ಟಿ ಖಾದರ್, ವಿನಯ್ ಕುಮಾರ್ ಸೊರಕೆ, ಶಕುಂತಲಾ ಶೆಟ್ಟಿ, ಐವನ್ ಡಿಸೋಜಾ, ಮಂಜುನಾಥ ಭಂಡಾರಿ, ಮಿಥುನ್ ರೈ, ಹರೀಶ್ ಕುಮಾರ್ ಮೊದಲಾದವರು ಭಾಗವಹಿಸಿದ್ದರು.

Related posts