ಬೆಂಗಳೂರು: “ಅನಂತಕುಮಾರ್ ಅವರು ಇದ್ದಿದ್ದರೇ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ. ಅವರು ಅಜಾತಶತ್ರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಶನಿವಾರ ನಡೆದ ಅನಂತ ನಮನ -64 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಅನಂತಕುಮಾರ್ ಕೇಂದ್ರ ಸಚಿವರಾಗಿದ್ದಾಗ ಕಾವೇರಿ ನೀರಿನ ಬಗ್ಗೆ ರಾತ್ರೋರಾತ್ರಿ ಅಫೀಡವಿಟ್ ಬದಲಾಯಿಸಿ ಕರ್ನಾಟಕದ ಪರವಾಗಿ ನಿಂತಿದ್ದರು. ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಅವರು ಸದಾ ತಯಾರಿರುತ್ತಿದ್ದರು. ಎಂದು ನೆನಪಿಸಿದರು.
1985 ರಲ್ಲಿ ನನಗೆ ಮೊದಲ ಬಾರಿಗೆ ವಿಧಾನಸಭೆ ಟಿಕೆಟ್ ಸಿಕ್ಕಿದಾಗ, ಅನಂತ್ಕುಮಾರ್ ರಹಸ್ಯವಾಗಿ 5 ಸಾವಿರ ಹಣ ನೀಡಿದ್ದರು. ರಾಜ್ಯದ ಪರವಾಗಿ ನಿಲ್ಲುತ್ತಿದ್ದ ಅವರನ್ನು ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ನೆನಪಿಸಿಕೊಂಡರು.
ರಾಜ್ಯದಲ್ಲಿ ಮೆಟ್ರೋ ಬರಲು ಎಸ್.ಎಂ. ಕೃಷ್ಣ ಮತ್ತು ಅನಂತಕುಮಾರ್ ಕಾರಣ;
ನಾನು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಕೇಂದ್ರದಲ್ಲಿ ಅನಂತಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದರು. ಹಿಂದಿನ ಜೆ.ಎಚ್.ಪಟೇಲ್ ಸರ್ಕಾರ ಮೋನೊ ರೈಲಿಗೆ ಒಪ್ಪಿಗೆ ನೀಡಿತ್ತು. ಹುಡ್ಕೋ ಸಂಸ್ಥೆಯಿಂದ ನನ್ನನ್ನು ಹಾಗೂ ಇತರೇ ಸ್ನೇಹಿತರನ್ನು ವಿದೇಶಕ್ಕೆ ಮೆಟ್ರೊ ಕಾರ್ಯಾಚರಣೆ ಬಗ್ಗೆ ಅಧ್ಯಯನ ಮಾಡಲು ಪ್ರವಾಸ ಕಳುಹಿಸಿದ್ದರು. ಶ್ರೀಧರನ್ ಅವರು ಜೊತೆಯಲ್ಲಿ ಇದ್ದರು. ನಾವು ಮೆಟ್ರೋ ಇದ್ದರೆ ಅನುಕೂಲ ಎಂದು ಎಸ್.ಎಂ.ಕೃಷ್ಣ ಅವರಿಗೆ ವರದಿ ನೀಡಿದೆವು. ಅವರು ಅನಂತಕುಮಾರ್ ಅವರನ್ನು ಭೇಟಿಯಾಗಲು ಹೇಳಿದರು. ಕೇವಲ ಒಂದೇ ದಿನದಲ್ಲಿ ಪ್ರಧಾನಿಗಳಾದ ವಾಜಪೇಯಿ ಅವರನ್ನು ಭೇಟಿ ಮಾಡಿಸಿ, ನಿಮ್ಮ ಸಮಿತಿಯ ವರದಿ ಸರಿಯಾಗಿದೆ ಎಂದು ಹೇಳಿ, ಕೇಂದ್ರದಿಂದ ಒಪ್ಪಿಗೆ ಕೊಡಿಸಿದರು. ಯಾರು ಏನೇ ಹೇಳಿದರೂ ಬೆಂಗಳೂರು ಮೆಟ್ರೋ ಅನಂತ ಕುಮಾರ್ ಅವರ ಹಾಗೂ ಕೃಷ್ಣ ಅವರ ಕೊಡುಗೆ ಎಂದರು.
ನಾನು ದೇವರು ಹಾಗೂ ಧರ್ಮದ ಬಗ್ಗೆ ನಂಬಿಕೆ ಇರುವವನು. ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸಯ್ಯ ಎನ್ನುವ ಪುರಂದರದಾಸರ ಮಾತಿನಂತೆ ಬದುಕಿದವರು ಅನಂತ್ಕುಮಾರ್. ಆದರೆ ಅವರ ವಿಚಾರದಲ್ಲಿ ದೇವರು ಕ್ರೂರಿಯಾಗಿಬಿಟ್ಟ ಎಂದ ಡಿಕೆಶಿ, ಯಾವಾಗಲೂ ಎಲ್ಲರನ್ನೂ ನಗಿಸುತ್ತಾ ಇದ್ದವರು. ಡಿವಿಜಿ ಅವರ ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ, ನಗುವ ಕೇಳುತ ನಗುವುದತಿಶಯದ ಧರ್ಮ, ನಗುವ ನಗಿಸುವ ನಗಿಸಿ ನಗುತ ಬಾಳುವ ಎಂಬ ಕಗ್ಗದಂತೆ ಬಾಳಿದವವರು ಅನಂತಕುಮಾರ್.ಎಂದರು.