ಬೆಂಗಳೂರು: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಸಿಐಡಿ ಡಿಜಿಪಿಯಾಗಿದ್ದ ಪ್ರವೀಣ್ ಸೂದ್ ಅಧಿಕಾರ ವಹಿಸಿಕೊಂಡಿದ್ದಾರೆ.
ಈವರೆಗೂ ಡಿಜಿ-ಐಜಿಯಾಗಿದ್ದ ನೀಲಮಣಿ ಎನ್.ರಾಜು ಅವರು ಇಂದು ನಿವೃತ್ತಿಯಾದರು. ಅವರ ಸ್ಥಾನಕ್ಕೆ ಪ್ರವೀಣ್ ಸೂದ್ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದ್ದು ಸರ್ಕಾರದ ಆದೇಶದಂತೆ ಪ್ರವೀಣ್ ಸೂದ್ ಅಧಿಕಾರ ವಹಿಸಿಕೊಂಡರು. ನಿರ್ಗಮಿತ ಡಿಜಿಪಿ ನೀಲಮಣಿ ಎನ್.ರಾಜು ಅವರು ನೂತನ ಪೊಲೀಸ್ ಮಹಾ ನಿರ್ದೇಶಕರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ರಾಜ್ಯ ಪೊಲೀಸ್ ಮುಖ್ಯಸ್ಥರಾಗಿರುವ ಈ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿಯಾಗಿರುವ ಎ.ಎಂ.ಪ್ರಸಾದ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ ಕೊನೇ ಗಳಿಗೆಯಲ್ಲಿ ಪ್ರವೀಣ್ ಸೂದ್ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಎ.ಎಂ.ಪ್ರಸಾದ್ 1985ನೇ ಬ್ಯಾಚ್’ನ ಐಪಿಎಸ್ ಅಧಿಕಾರಿ. ಇವರ ಸೇವಾವಧಿ ಕೇವಲ ಇನ್ನು 9 ತಿಂಗಳು ಮಾತ್ರ ಇದೆ. ಆದರೆ 1986ನೇ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಿರುವ ಸರ್ಕಾರದ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ, ಮೂವರು ಐಪಿಎಸ್ ಅಧಿಕಾರಿಗಳನ್ನು ಎಡಿಜಿಪಿಯಿಂದ ಡಿಜಿಪಿ ದರ್ಜೆಗೆ ಬಡ್ತಿ ನೀಡಲಾಗಿದೆ. ಅಲೋಕ್ ಮೋಹನ್, ಎನ್.ಎಸ್.ಮೇಘರಿಕ್ ಮತ್ತು ಆರ್.ಪಿ.ಶರ್ಮಾ ಎಡಿಜಿಪಿಯಿಂದ ಡಿಜಿಪಿಯಾಗಿ ಬಡ್ತಿ ಪಡೆದ ಅಧಿಕಾರಿಗಳು.