NWKRTC: ಸಾವಳಗಿ, ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳು ಲೋಕಾರ್ಪಣೆ

ಬಾಗಲಕೋಟೆ: ವಾಯುವ್ಯ ರಸ್ತೆ ಸಾರಿಗೆ ನಿಗಮ (NWKRTC) ವ್ಯಾಪ್ತಿಯ ಬಾಗಲಕೋಟೆ ಜಿಲ್ಲೆ ಸಾವಳಗಿ, ರಬಕವಿ-ಬನಹಟ್ಟಿಯ ಸುಸಜ್ಜಿತ ಬಸ್ ನಿಲ್ದಾಣಗಳು ಲೋಕಾರ್ಪಣೆಯಾಗಿದೆ.

ಸಾವಳಗಿ, ರಬಕವಿ-ಬನಹಟ್ಟಿ ಬಸ್ ನಿಲ್ದಾಣಗಳನ್ನು  ಸಾರಿಗೆ ಹಾಗೂ ‌ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು ಭಾನುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ರಾಮಲಿಂಗ ರೆಡ್ಡಿ, ವಾಕರಸಾ ಸಂಸ್ಥೆಯಲ್ಲಿ ಚಾಲನಾ ಸಿಬ್ಬಂದಿಗಳ ಕೊರತೆ ಇದ್ದು, 2000 ಚಾಲನಾ ಸಿಬ್ಬಂದಿಗಳ ನೇಮಕಕ್ಕೆ ಅನುಮೋದನೆಯನ್ನು ‌ನೀಡಿದ್ದು, ಈಗಾಗಲೇ 1000 ಜನರ ನೇಮಕಾತಿ ‌ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ನಾನು ಈ ಹಿಂದೆ ಸಾರಿಗೆ ಮಂತ್ರಿಯಾಗಿದ್ದ ಸಮಯದಲ್ಲಿ ನವನಗರ, ಜಮಖಂಡಿ, ತೇರದಾಳ, ಬಾದಾಮಿ, ಹುನಗುಂದ, ಬಾಡಗಂಡಿ, ಹಾಗು ಯಡಹಳ್ಳಿ ನೂತನ ಬಸ್ ನಿಲ್ದಾಣಗಳ ನಿರ್ಮಾಣ ಮಾಡಲಾಗಿತ್ತು. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚಿನ ‌ಬಸ್ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ ಎಂದ ಅವರು, ಕಳೆದ 5 ವರ್ಷಗಳಿಂದ ‌ಹೊಸ ಬಸ್ಸುಗಳ ಖರೀದಿ ಇರಲಿಲ್ಲ. ಈಗ‌ ನಮ್ಮ‌ ಸರ್ಕಾರ ಬಂದ ಮೇಲೆ ಹೊಸ ಬಸ್ಸುಗಳನ್ನು ಖರೀದಿ ಮಾಡಿದ್ದೇವೆ ಎಂದು ತಿಳಿಸಿದರು.

ಅಲ್ಲದೇ, ಸಾವಳಗಿ‌ ಗ್ರಾಮದ 31 ವರ್ಷಗಳ ಕನಸು ಈ ನೂತನ ಬಸ್ ನಿಲ್ದಾಣವನ್ನು ಇದೀಗ ಉದ್ಘಾಟನೆ ಮಾಡಿದ್ದೇವೆ. ಜೊತೆಗೆ ಶಿಥಿಲಾವಸ್ಥೆಯಲ್ಲಿದ್ದ ಹಳೆಯ ರಬಕವಿ ಮತ್ತು ಬನಹಟ್ಟಿ ಬಸ್ ನಿಲ್ದಾಣಗಳನ್ನು ತೆರವುಗೊಳಿಸಿ, ನೂತನವಾಗಿ ರಬಕವಿ ಮತ್ತು ಬನಹಟ್ಟಿ ಬಸ್ ನಿಲ್ದಾಣಗಳನ್ನೂ ಉದ್ಘಾಟನೆ ಮಾಡಿದ್ದೇವೆ ಎಂದ ಸಚಿವರು, ಈ ಭಾಗದಿಂದ ಬೆಂಗಳೂರಿಗೆ ಪಲ್ಲಕ್ಕಿ‌ ಬಸ್ಸುಗಳ ಬೇಡಿಕೆ‌ ಇದ್ದು, ಸದ್ಯ KSRTC ಯಲ್ಲಿ ‌ಮಾತ್ರ ಪಲ್ಲಕ್ಕಿ‌ ಬಸ್ಸುಗಳ ಖರೀದಿ ‌ಇದ್ದು, KSRTC ಬೆಂಗಳೂರಿನಿಂದಲೇ ಈ ಭಾಗಕ್ಕೆ ಪಲ್ಲಕ್ಕಿ ಬಸ್ಸುಗಳ ಕಾರ್ಯಾಚರಣಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ KSRTC ಕಾರ್ಮಿಕ‌ ಸಂಘಟನೆಯ ಮನವಿ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ, ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಾದ ಭರಮಗೌಡ ಕಾಗೆ, ಶಾಸಕರಾದ ಸಿದ್ದು ಸವದಿ,  ಜಗದೀಶ್ ಎಸ್ ಗುಡುಗುಂಟಿ, ಆನಂದ್‌ ನ್ಯಾಮಗೌಡ, ಸಿದ್ದು ಕೋಣೋರು ಪೀರಸಾಬ ಕೌತಾಳ, ವಿದ್ಯಾ ಪ್ರವೀಣ ದಬಾಡಿ, ಕವಿತಾ ಎಸ್ ಪಾಟೋಳಿ, ಪ್ರಿಯಾಂಗಾ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

Related posts