ನವದೆಹಲಿ: ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಬರುವ ಏಷ್ಯಾಕಪ್ ಟೂರ್ನಿಯಿಂದ ಟೀಮ್ ಇಂಡಿಯಾ ಹೊರಗುಳಿಯಲಿದೆ. ಈ ಕುರಿತಂತೆ ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪತ್ರ ಬರೆದಿದೆ.
ಭಾರತ-ಪಾಕಿಸ್ತಾನ ನಡುವಿನ ಘರ್ಷಣೆ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಟೂರ್ನಿಗಳಿಂದ ಸದ್ಯಕ್ಕೆ ದೂರವಿರಲು ನಿರ್ಧರಿಸಿದೆ. ಶ್ರೀಲಂಕಾದಲ್ಲಿ ಮಹಿಳಾ ತಂಡಗಳ ಏಷ್ಯಾಕಪ್ ಟೂರ್ನಿ ನಡೆಯಲಿದೆ. ಈ ಟೂರ್ನಿಗೂ ಭಾರತ ತಂಡವನ್ನು ಕಳುಹಿಸದಿರಲು ಬಿಸಿಸಿಐ ನಿರ್ಧರಿಸಿದೆ. ಏಷ್ಯಾನ್ ಕ್ರಿಕೆಟ್ ಕೌನ್ಸಿಲ್ಗೆ ಪಾಕಿಸ್ತಾನದ ಸಚಿವರು ಮುಖ್ಯಸ್ಥರಾಗಿರುವ ಹಿನ್ನೆಲೆಯಲ್ಲಿ ಎಸಿಸಿ ಆಯೋಜಿಸುವ ಪಂದ್ಯಾವಳಿಯಲ್ಲಿ ಭಾರತ ತಂಡ ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಪ್ರತಿಪಾದಿಸಿದೆ. ಹಾಗಾಗಿ ಈ ವರ್ಷದ ಏಷ್ಯಾಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಭಾಗವಹಿಸಲ್ಲ.
ಈ ನಡುವೆ, ಏಷ್ಯಾಕಪ್ ಟೂರ್ನಿಯ ಪ್ರಾಯೋಜಕತ್ವದಲ್ಲಿ ಭಾರತದ್ದೇ ಬಹುಪಾಲು. ಅಷ್ಟೇ ಅಲ್ಲ, ಈ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನಕ್ಕೆ ಸಾಕಷ್ಟು ಆದಾಯ ಸಿಗುವ ಸಾಧ್ಯತೆಗಳಿತ್ತು. ಇದೀಗ ಏಷ್ಯಾಕಪ್ ಟೂರ್ನಿಯಿಂದ ಟೀಮ್ ಇಂಡಿಯಾ ಟೂರ್ನಿಯಿಂದ ದೂರ ಉಳಿಯುವ ಮೂಲಕ ಪಾಕಿಸ್ತಾನದ ಕ್ರಿಕೆಟ್ ಆದಾಯಕ್ಕೂ ಹೊಡೆತ ನೀಡಲು ಭಾರತ ಮುಂದಾಗಿರುವುದು ಅಚ್ಚರಿಯ ನಿರ್ಧಾರವಾಗಿದೆ.