ಒಂದೇ ಮಳೆಗೆ ಬ್ರಾಂಡ್ ಬೆಂಗಳೂರು ನಿಜ ಬಣ್ಣ ಬಯಲು; ಜಾಗತಿಕ ಮಟ್ಟದಲ್ಲಿ ಅಪಮಾನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಭವಿಸಿರುವ ಮಳೆ ಅನಾಹುತ ಪರಿಹಾರ ಕಾರ್ಯಕ್ಕೆ ತಕ್ಷಣ ಒಂದು ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರಾದ ಆರ್. ಅಶೋಕ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮುಂಗಾರು ಪೂರ್ವದ ಒಂದೇ ಒಂದು ಮಳೆ ಕಾಂಗ್ರೆಸ್ ಸರ್ಕಾರದ “ಬ್ರಾಂಡ್ ಬೆಂಗಳೂರು”ನ ನಿಜ ಬಣ್ಣ ಬಯಲು ಮಾಡಿದೆ. ಇಂತಹ ಸನ್ನಿವೇಶದಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಸಿಎಂ, ಡಿಸಿಎಂ ಮತ್ತು ಸಚಿವರು ಸಾಧನಾ ಸಮಾವೇಶದಲ್ಲಿ ಮೆರೆದಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಪಮಾನ

ಹಿಂದಿನ ವರ್ಷದ ಲೋಪಗಳಿಂದ ಪಾಠ ಕಲಿಯದ ಸರ್ಕಾರದ ಬೇಜವಾಬ್ದಾರಿತನದಿಂದ ನಗರದಲ್ಲಿ ಅನಾಹುತ ಸಂಭವಿಸಿದೆ. ಮುಂಚಿತವಾಗಿ ಮೋರಿ, ಚರಂಡಿ, ರಾಜ ಕಾಲುವೆಗಳಲ್ಲಿ ಹೂಳು ತೆಗೆಸುವ ಕೆಲಸ ಮಾಡಬೇಕಿತ್ತು. ನಗರದ ಅನೇಕ ಕಡೆ ವೈಟ್ ಟಾಫಿಂಗ್ ಮತ್ತು ರಿಪೇರಿ ಕಾಮಗಾರಿ ನಡೆಯುತ್ತಿದ್ದು ಅಲ್ಲಿನ ಅವಶೇಷಗಳನ್ನು ತೆರವು ಮಾಡಿದಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಬಿಬಿಎಂಪಿ ಮುನ್ನೆಚ್ಚರಿಕೆ ವಹಿಸದಿರುವುದೇ ಅನಾಹುತಗಳಿಗೆ ಕಾರಣ ಎಂದು ಖುದ್ದು ಗೃಹ ಸಚಿವ ಪರಮೇಶ್ವರ ಅವರು ಹೇಳಿದ್ದಾರೆ. ಉಸ್ತುವಾರಿ ಸಚಿವ ಡಿಕೆಶಿ ಅವರ ವೈಫಲ್ಯಕ್ಕೆ ಇದಕ್ಕಿಂತ ಇನ್ಯಾವುದೇ ಸರ್ಟಿಫಿಕೇಟ್ ಬೇಕಾ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಮನೆ ಬಾಗಿಲಿಗೆ ಪರಿಹಾರ ಅಲ್ಲ; ಕೊಳಚೆ ನೀರು

ಕಳೆದ ವರ್ಷ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಬಾಗಿಲಿಗೆ ಪರಿಹಾರ ಹೆಸರಿನಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿದ್ದ ಶಿವಕುಮಾರ್ ಅವರು, ಸಾರ್ವಜನಿಕರಿಗೆ ಭರವಸೆಗಳ ಮಹಾಪೂರವನ್ನೇ ಹರಿಸಿದ್ದರು. ಈಗ ಅದೆಲ್ಲಾ ಏನಾಯಿತು ಎಂಬ ಉತ್ತರ ನೀಡಬೇಕು. ಅವರು ಪರಿಹಾರ ನೀಡಲಿಲ್ಲ, ಪ್ರವಾಹದ ನೀರು ಮತ್ತು ಕಸದ ರಾಶಿಯನ್ನು ಮನೆಬಾಗಿಲಿಗೆ ತಂದು ಹಾಕಿದ್ದಾರೆ ಎಂದು ಗೇಲಿ ಮಾಡಿದ್ದಾರೆ.

ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ವರ್ತಿಸಿರುವ ಶಿವಕುಮಾರ್ ಅವರು, ಹಿಂದಿನ ಸರ್ಕಾರದ ಲೋಪ ಅನಾಹುತಕ್ಕೆ ಕಾರಣ ಎಂದಿದ್ದಾರೆ. ಆಗಾದರೆ ಎರಡು ವರ್ಷಗಳ ಕಾಲ ಇವರು ಕಡಿದು ಕಟ್ಟೆ ಹಾಕಿದ್ದೇನು? ಇದೇನಾ ಇವರ ಬ್ರಾಂಡ್ ಬೆಂಗಳೂರು? ಹೆಸರಿಗೆ ಮಾತ್ರ ಗ್ರೆಟರ್, ದಿನವೂ ಜನರಿಗೆ ಟಾರ್ಚರ್ ತಪ್ಪಿಲ್ಲ. ಒಂದೇ ಮಳೆಗೆ ಇವರ ಬ್ರಾಂಡ್ ಬೆಂಗಳೂರು ಕೊಚ್ಚಿ ಹೋಯ್ತು. ಜಾಗತಿಕ ಮಟ್ಟದಲ್ಲಿ ಬೆಂಗಳೂರು ಮಾನ ಹರಾಜಾಗಿದೆ ಎಂದು ಅಶೋಕ್ ಕಿಡಿ ಕಾರಿದ್ದಾರೆ.

ಈ ನಡುವೆ, ಮಳೆಯಿಂದಾಗಿ ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಅಧ್ವಾನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಪ್ರತಿಪಕ್ಷ ಬಿಜೆಪಿ,’DCM ಡಿ.ಕೆ.ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರನ್ನು ಪ್ರಚಾರ ಮಾಡುತ್ತಿದ್ದಾರೆ ಎಂದೂ ಹೂಡಿಕೆದಾರರನ್ನು ಸ್ವಾಗತಿಸುತ್ತಿದ್ದಾರೆ ವ್ಯಂಗ್ಯವಾಡಿದೆ.

Related posts