ತಾಯ್ನಾಡಿಗೆ ವಾಪಸ್ಸಾದ ಶುಭಾಂಶು ಶುಕ್ಲಾಗೆ ಅದ್ಧೂರಿ ಸ್ವಾಗತ

ನವದೆಹಲಿ: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಭಾನುವಾರ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಮಧ್ಯರಾತ್ರಿ 1:30ರ ವೇಳೆಗೆ ಅಮೆರಿಕದಿಂದ ದೆಹಲಿಗೆ ಆಗಮಿಸಿದ ಶುಭಾಂಶು ಶುಕ್ಲಾ ಅವರಿಗೆ ಇಂದಿರಾ ಗಾಂಧಿ ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಕೇಂದ್ರ ಸಚಿವ ಜಿತೇಂದ್ರ ಸಿಂಗ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಶುಭಾಂಶು ಶುಕ್ಲಾ ಅವರು ಶುಭಾಂಶು ಶುಕ್ಲಾರನ್ನು ಬರಮಾಡಿಕೊಂಡರು.
ಐಎಸ್‍ಎಸ್‍ನಲ್ಲಿ 18 ದಿನಗಳನ್ನು ಕಳೆದ ನಂತರ ಗಗನಯಾತ್ರಿ ಕಳೆದ ತಿಂಗಳು ಭೂಮಿಗೆ ಮರಳಿದ್ದರು. ಈ ಅವಧಿಯಲ್ಲಿ ಅವರು ಭಾರತಕ್ಕೆ ಸಂಬಂಧಿಸಿದ 7 ನಿರ್ದಿಷ್ಟ ಪ್ರಯೋಗಗಳನ್ನು ನಡೆಸಿದ್ದಾರೆ. ಆಕ್ಸಿಯಂ-4 ಮಿಷನ್‍ಗಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಐತಿಹಾಸಿಕ ಭೇಟಿ ನೀಡಿದ್ದ ಶುಕ್ಲಾ ಆಗಸ್ಟ್ 22-23 ರಂದು ನಡೆಯಲಿರುವ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಶುಭಾಂಶು ಶುಕ್ಲಾ ಅವರು ಭಾರತಕ್ಕೆ ಮರಳಿರುವ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಭಾರತಕ್ಕೆ ಹೆಮ್ಮೆಯ ಕ್ಷಣ! ಇಸ್ರೋಗೆ ಹೆಮ್ಮೆಯ ಕ್ಷಣ! ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇದಕ್ಕೆ ಅವಕಾಶ ನೀಡಿದ ವ್ಯವಸ್ಥೆಗೆ ಕೃತಜ್ಞತೆಯ ಕ್ಷಣ ಎಂದಿದ್ದಾರೆ.

Related posts