ಬೊಗೋಟಾ: ದಕ್ಷಿಣ ಕೊಲಂಬಿಯಾದ ಪುಟುಮಾಯೊ ಪ್ರದೇಶದಲ್ಲಿ ಸೈನಿಕ ಸಾರಿಗೆ ವಿಮಾನ ಪತನಗೊಂಡ ಪರಿಣಾಮ ಕನಿಷ್ಠ 66 ಮಂದಿ ಸಾವನ್ನಪ್ಪಿದ್ದು, 83 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ಮಾಹಿತಿ ನೀಡಿದೆ.
ಪುಟುಮಾಯೊ ಗವರ್ನರ್ ಜಾನ್ ಗೇಬ್ರಿಯಲ್ ಮೋಲಿನಾ ಈ ಮಾಹಿತಿ ನೀಡಿದ್ದು, ದುರಂತವು ದೊಡ್ಡ ಮಾನವೀಯ ನಷ್ಟಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಅಪಘಾತಕ್ಕೀಡಾದ ವಿಮಾನವು ಸಿ-130 ಹರ್ಕ್ಯುಲಸ್ ಮಾದರಿಯದ್ದಾಗಿದ್ದು, ಇದರಲ್ಲಿ 114 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಇದ್ದರು ಎಂದು ಕೊಲಂಬಿಯಾದ ಏರೋಸ್ಪೇಸ್ ಫೋರ್ಸ್ ಕಮಾಂಡರ್ ಕಾರ್ಲೋಸ್ ಸಿಲ್ವಾ ತಿಳಿಸಿದ್ದಾರೆ.
ಪೋರ್ಟೊ ಲೆಗುಯಿಜಾಮೊದಿಂದ ಟೇಕ್ ಆಫ್ ಆಗುವ ವೇಳೆ ವಿಮಾನ ಪತನಗೊಂಡಿದೆ ಎಂದು ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ತಿಳಿಸಿದ್ದಾರೆ. ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ; ತನಿಖೆಗಾಗಿ ವಿಶೇಷ ತಂಡವನ್ನು ರವಾನಿಸಲಾಗಿದೆ.
ಗಾಯಗೊಂಡ ಸೈನಿಕರಲ್ಲಿ ಕೆಲವರನ್ನು ತುರ್ತು ಚಿಕಿತ್ಸೆಗಾಗಿ ರಾಜಧಾನಿ ಬೊಗೋಟಾಗೆ ಸ್ಥಳಾಂತರಿಸಲಾಗಿದೆ.
ಘಟನೆಯ ಬಗ್ಗೆ ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ತೀವ್ರ ದುಃಖ ವ್ಯಕ್ತಪಡಿಸಿ, “ಇಂತಹ ದುರಂತ ಸಂಭವಿಸಬಾರದು” ಎಂದು ಹೇಳಿದ್ದಾರೆ. ಸಶಸ್ತ್ರ ಪಡೆಗಳ ಆಧುನೀಕರಣದ ಕೊರತೆ ಮತ್ತು ಆಡಳಿತಾತ್ಮಕ ಅಡಚಣೆಗಳ ಬಗ್ಗೆ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

