ಸಿಎಂ ಬದಲಾವಣೆ ಸಾಲದು, ಕಾಂಗ್ರೆಸ್ ಸರ್ಕಾರವೇ ಬದಲಾಗಬೇಕು: ಅಶೋಕ್

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತ ರಾಜಕೀಯ ಚರ್ಚೆಗಳ ನಡುವೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಕರ್ನಾಟಕಕ್ಕೆ ಇಂದು ಬೇಕಿರುವುದು ಕೇವಲ ಮುಖ್ಯಮಂತ್ರಿ ಬದಲಾವಣೆ ಅಲ್ಲ, ಈ ಜನವಿರೋಧಿ ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಬದಲಾವಣೆ” ಎಂದು ಹೇಳಿದ್ದಾರೆ.

2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಆಡಳಿತವೇ ಮರೀಚಿಕೆಯಾಗಿದೆ. ಅಭಿವೃದ್ಧಿ, ರೈತರ ಸಮಸ್ಯೆ, ಯುವಕರ ಭವಿಷ್ಯ ಸೇರಿದಂತೆ ಜನಸಾಮಾನ್ಯರ ವಿಚಾರಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿವೆ ಎಂದು ಆರೋಪಿಸಿದ್ದಾರೆ.

“ಕುರ್ಚಿ ಯಾರಿಗೆ?” ಎನ್ನುವ ಒಳಜಗಳದಲ್ಲೇ ಸರ್ಕಾರ ಮುಳುಗಿದ್ದು, “ಅಧಿಕಾರ ಹಂಚಿಕೆ” ಈಗ ಬೀದಿ ನಾಟಕದ ಮಟ್ಟಕ್ಕೆ ಇಳಿದಿದೆ. ಪ್ರಜಾಸೌಧದಲ್ಲಿ ಆಡಳಿತದ ಚರ್ಚೆಗಿಂತ ಅಧಿಕಾರದ ಲೆಕ್ಕಾಚಾರವೇ ಹೆಚ್ಚಾಗಿದೆ ಎಂದು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಮುಂದುವರಿದರೂ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೂ ಅಥವಾ ಮತ್ತೊಬ್ಬರನ್ನು ಕೂರಿಸಿದರೂ ರಾಜ್ಯಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.

“ಈ ಸರ್ಕಾರಕ್ಕೆ ಅಭಿವೃದ್ಧಿ ಬಗ್ಗೆ ದೃಷ್ಟಿಯಿಲ್ಲ, ರೈತರ ಬಗ್ಗೆ ಕಾಳಜಿಯಿಲ್ಲ, ಯುವಕರ ಭವಿಷ್ಯದ ಬಗ್ಗೆ ಚಿಂತೆಯಿಲ್ಲ. ಇವರ ಏಕೈಕ ಅಜೆಂಡಾ ಕುರ್ಚಿ, ಅಧಿಕಾರ ಮತ್ತು ಸ್ವಾರ್ಥ ರಾಜಕಾರಣ” ಎಂದು ಅವರು ಆರೋಪಿಸಿದ್ದಾರೆ.

ರಾಜ್ಯದ ಅಭಿವೃದ್ಧಿಯನ್ನು ಬಲಿಕೊಟ್ಟು ಒಳಜಗಳದಲ್ಲಿ ತೊಡಗಿರುವ ಕಾಂಗ್ರೆಸ್‌ಗೆ ಜನರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

Related posts