ಹವಾಮಾನ ಬದಲಾವಣೆ: ಸಮುದಾಯ ಆಧಾರಿತ ಸ್ಥಿತಿಸ್ಥಾಪಕತ್ವಕ್ಕೆ ಮುರ್ಮು ಕರೆ

ನವದೆಹಲಿ: ಹವಾಮಾನ ಬದಲಾವಣೆ ಸೇರಿದಂತೆ ಪರಿಸರ ಸವಾಲುಗಳನ್ನು ಎದುರಿಸಲು ಜನ-ಕೇಂದ್ರಿತ ಹಾಗೂ ಸಮುದಾಯ ಆಧಾರಿತ ಕ್ರಮಗಳ ಮೂಲಕ ಬಲವಾದ ಸ್ಥಿತಿಸ್ಥಾಪಕತ್ವ ನಿರ್ಮಿಸಬೇಕಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ ನೀಡಿದ್ದಾರೆ.

ನವದೆಹಲಿಯಲ್ಲಿ ನಡೆದ ‘ಪರಿಸರ ಮತ್ತು ಹವಾಮಾನ ಚಲನಶೀಲತೆಯ ಭವಿಷ್ಯ’ ಕುರಿತ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT)ಯ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಿಸರ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಾಂಪ್ರದಾಯಿಕ ಜ್ಞಾನ ಹಾಗೂ ಸ್ಥಳೀಯ ಸಮುದಾಯಗಳ ಅನುಭವಗಳನ್ನು ಬಳಸಿಕೊಳ್ಳುವ ಅಗತ್ಯವನ್ನು ಮುರ್ಮು ಒತ್ತಿ ಹೇಳಿದರು. ಪರಿಸರ ಆಡಳಿತವನ್ನು ಬಲಪಡಿಸುವಲ್ಲಿ NGT ವಹಿಸುತ್ತಿರುವ ಪಾತ್ರವನ್ನೂ ಅವರು ಶ್ಲಾಘಿಸಿದರು.

ಕೇಂದ್ರ ಸಚಿವ ಮನೋಹರ್ ಲಾಲ್ ಅವರು ಅಭಿವೃದ್ಧಿ ಮತ್ತು ಪರಿಸರ ಸುಸ್ಥಿರತೆಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಭಾರತ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ದೇಶದ ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ಪಳೆಯುಳಿಕೆಯೇತರ ಇಂಧನ ಮೂಲಗಳ ಪಾಲು ಸುಮಾರು 55% ತಲುಪಿದೆ ಎಂದು ಅವರು ತಿಳಿಸಿದರು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಸಾಧಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಪರಿಣಾಮಕಾರಿ ಸಂಸ್ಥೆಗಳು, ಕಾನೂನು ಜಾರಿ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯದ ಸುಲಭ ಪ್ರವೇಶ ಪರಿಸರ ಆಡಳಿತದ ಪ್ರಮುಖ ಅಂಶಗಳಾಗಿವೆ ಎಂದು ಅವರು ಹೇಳಿದರು.

ಪರಿಸರ ಆಡಳಿತವು ಸವಾಲುಗಳನ್ನು ಗುರುತಿಸುವುದಕ್ಕೆ ಸೀಮಿತವಾಗದೆ ಪರಿಣಾಮಕಾರಿ ಕಾನೂನುಗಳು, ಸಂಸ್ಥೆಗಳು ಮತ್ತು ಪಾಲುದಾರಿಕೆಗಳನ್ನು ರೂಪಿಸುವತ್ತ ಸಾಗಬೇಕು ಎಂದು NGT ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಹೇಳಿದರು.

ಕಾನೂನು, ವಿಜ್ಞಾನ, ಆಡಳಿತ ಮತ್ತು ಅರ್ಥಶಾಸ್ತ್ರವನ್ನು ಸಮನ್ವಯಗೊಳಿಸುವ ಮೂಲಕ ಪರಿಸರ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಭಿಪ್ರಾಯಪಟ್ಟರು.

ಸೆಪ್ಟೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಸಮ್ಮೇಳನದಲ್ಲಿ 17 ದೇಶಗಳ ನ್ಯಾಯಶಾಸ್ತ್ರಜ್ಞರು, ನೀತಿ ನಿರೂಪಕರು, ವಿಜ್ಞಾನಿಗಳು ಹಾಗೂ ಪರಿಸರ ತಜ್ಞರು ಭಾಗವಹಿಸಿದ್ದರು. ಯುಎನ್‌ಇಪಿ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು.

ಹವಾಮಾನ ಬದಲಾವಣೆ, ಗಡಿಯಾಚೆಗಿನ ಸಹಕಾರ, ಅರಣ್ಯ ಸಂರಕ್ಷಣೆ, ಜೀವವೈವಿಧ್ಯ ಮತ್ತು ಸುಸ್ಥಿರ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಿತು.

ಸಮಾರೋಪ ಅಧಿವೇಶನದಲ್ಲಿ ಮನೋಹರ್ ಲಾಲ್ ಅವರು NGTಯ ಸ್ಮರಣಿಕೆ ‘ಹರಿತ್ ನ್ಯಾಯಂ’ ಬಿಡುಗಡೆ ಮಾಡಿದರು.

Related posts