ಉತ್ತರ ಕನ್ನಡದಲ್ಲಿ TRAI ಮೊಬೈಲ್ ನೆಟ್‌ವರ್ಕ್ ಪರೀಕ್ಷೆ; ಟೆಲಿಕಾಂ ಕಂಪನಿಗಳ ಸೇವೆಯಲ್ಲಿ ಗಮನಾರ್ಹ ವ್ಯತ್ಯಾಸ

ನವದೆಹಲಿ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಸಿದ ಸ್ವತಂತ್ರ ಮೊಬೈಲ್ ನೆಟ್‌ವರ್ಕ್ ಗುಣಮಟ್ಟ ಪರೀಕ್ಷೆಯ ವರದಿಯನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಪ್ರಕಟಿಸಿದ್ದು, ವಿವಿಧ ಟೆಲಿಕಾಂ ಕಂಪನಿಗಳ ಸೇವೆಯಲ್ಲಿ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ.

ಮೇ 18ರಿಂದ 21ರವರೆಗೆ ಕಾರವಾರ, ಅಂಕೋಲಾ, ಕುಮಟಾ, ಶಿರಸಿ, ಭಟ್ಕಳ, ದಾಂಡೇಲಿ, ಹಳಿಯಾಳ, ಯಲ್ಲಾಪುರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಏರ್‌ಟೆಲ್, ಬಿಎಸ್‌ಎನ್‌ಎಲ್, ರಿಲಯನ್ಸ್ ಜಿಯೋ ಹಾಗೂ ವೊಡಾಫೋನ್ ಐಡಿಯಾ ಸೇವೆಗಳ ಗುಣಮಟ್ಟವನ್ನು ಪರಿಶೀಲಿಸಲಾಯಿತು.

ಡೌನ್‌ಲೋಡ್ ವೇಗದಲ್ಲಿ ರಿಲಯನ್ಸ್ ಜಿಯೋ ಸರಾಸರಿ 229.12 Mbps ದಾಖಲಿಸಿ ಮೊದಲ ಸ್ಥಾನ ಪಡೆದಿದೆ. ಬಳಿಕ ಏರ್‌ಟೆಲ್ 109.02 Mbps, ವೊಡಾಫೋನ್ ಐಡಿಯಾ 25.04 Mbps ಹಾಗೂ ಬಿಎಸ್‌ಎನ್‌ಎಲ್ 5.73 Mbps ವೇಗ ದಾಖಲಿಸಿವೆ.

ಅಪ್‌ಲೋಡ್ ವೇಗದಲ್ಲಿ ಏರ್‌ಟೆಲ್ 26.02 Mbps ದಾಖಲಿಸಿ ಅಗ್ರಸ್ಥಾನ ಪಡೆದಿದ್ದು, ಜಿಯೋ 18.19 Mbps, ವೊಡಾಫೋನ್ ಐಡಿಯಾ 10.78 Mbps ಹಾಗೂ ಬಿಎಸ್‌ಎನ್‌ಎಲ್ 2.07 Mbps ವೇಗ ದಾಖಲಿಸಿವೆ.

ಕಾಲ್ ಡ್ರಾಪ್ ಪರೀಕ್ಷೆಯಲ್ಲಿ ಏರ್‌ಟೆಲ್‌ಗೆ 14, ಬಿಎಸ್‌ಎನ್‌ಎಲ್‌ಗೆ 28, ಜಿಯೋಗೆ 17 ಹಾಗೂ ವೊಡಾಫೋನ್ ಐಡಿಯಾಗೆ 12 ಕರೆಗಳು ಕಡಿತಗೊಂಡಿವೆ.

440.5 ಕಿ.ಮೀ ನಗರ ರಸ್ತೆಗಳು, 761 ಕಿ.ಮೀ ರೈಲು ಮಾರ್ಗ, 12 ಹಾಟ್‌ಸ್ಪಾಟ್ ಪ್ರದೇಶಗಳು ಹಾಗೂ 8.7 ಕಿ.ಮೀ ನಡಿಗೆ ಮಾರ್ಗದಲ್ಲಿ ಈ ಪರೀಕ್ಷೆ ನಡೆಸಲಾಗಿದೆ.

ಪರೀಕ್ಷೆಯ ಫಲಿತಾಂಶಗಳನ್ನು ಸಂಬಂಧಿತ ಟೆಲಿಕಾಂ ಸಂಸ್ಥೆಗಳಿಗೆ ಹಂಚಲಾಗಿದ್ದು, ಸೇವೆಯ ಗುಣಮಟ್ಟ ಸುಧಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ TRAI ಸೂಚಿಸಿದೆ.

Related posts