ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಡಿರುವ ಆರೋಪಗಳು ವೈಯಕ್ತಿಕ ದ್ವೇಷದ ರಾಜಕಾರಣದ ಮುಂದುವರಿದ ಭಾಗ ಎಂದು ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು, ಕೇಂದ್ರ ಸಚಿವರಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಾದ ಕುಮಾರಸ್ವಾಮಿ ಅವರು ಪದೇಪದೇ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಹಾಗೂ ಸಚಿವರ ವಿರುದ್ಧ ಆರೋಪ ಮಾಡುವ ಮೂಲಕ ತಮ್ಮ ನಿಲುವುಗಳನ್ನು ಬಹಿರಂಗಪಡಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗ (KPSC) 1951ರಿಂದ ಕಾರ್ಯನಿರ್ವಹಿಸುತ್ತಿದ್ದು, ನೇಮಕಾತಿ ಹಾಗೂ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಆರೋಪಗಳು ಮತ್ತು ತನಿಖೆಗಳು ನಡೆದಿವೆ. ಪ್ರಸ್ತುತ ಕೇಳಿಬಂದಿರುವ ಆರೋಪಗಳೂ ಇದೇ ಹಿನ್ನೆಲೆಯಲ್ಲಿ ಪರಿಶೀಲನೆಗೆ ಒಳಪಡಬೇಕು ಎಂದು ರಮೇಶ್ ಬಾಬು ಹೇಳಿದ್ದಾರೆ.

ಕೆಪಿಎಸ್‌ಸಿ ಹಿಂದಿನ ಅಧ್ಯಕ್ಷರಾದ ಗೋಮಾಳ್ ಭೀಮಪ್ಪ ಹಾಗೂ ಎಚ್.ಎನ್. ಕೃಷ್ಣ ಅವರ ಅವಧಿಯಲ್ಲಿನ ನೇಮಕಾತಿ ಮತ್ತು ಅಕ್ರಮಗಳ ಆರೋಪಗಳನ್ನು ರಾಜ್ಯದ ಜನರು ಮರೆತಿಲ್ಲ. ಆ ಪ್ರಕರಣಗಳ ಹಿಂದೆ ಯಾರ ಪ್ರಭಾವ ಅಥವಾ ಕೃಪಾಪೋಷಣೆ ಇತ್ತು ಎಂಬುದನ್ನು ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಕೆಪಿಎಸ್‌ಸಿ ವಿಚಾರಕ್ಕೆ ಎಳೆದು ತರುವ ಮೂಲಕ ಕುಮಾರಸ್ವಾಮಿ ಅವರು ಸಂಘ ಪರಿವಾರವನ್ನು ಸಮರ್ಥಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದಲ್ಲಿನ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಅವರು ತಮ್ಮ ಹಿಂದಿನ ನಿಲುವುಗಳನ್ನು ಬದಲಿಸಿಕೊಂಡಿದ್ದಾರೆಯೇ ಎಂಬುದನ್ನು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ರಮೇಶ್ ಬಾಬು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಈ ಹಿಂದೆ ಆರ್‌ಎಸ್‌ಎಸ್ ಕುರಿತು ಮಾಡಿದ್ದ ಹಲವು ಟೀಕೆಗಳನ್ನು ಉಲ್ಲೇಖಿಸಿರುವ ಅವರು, ಇದೀಗ ಸಂಘ ಪರಿವಾರದ ಬಗ್ಗೆ ಏಕಾಏಕಿ ಮೃದು ನಿಲುವು ತಾಳಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದ್ದಾರೆ.
ಸಂದರ್ಭಕ್ಕೆ ತಕ್ಕಂತೆ ನಿಲುವು ಬದಲಿಸಿಕೊಳ್ಳುವ ಕುಮಾರಸ್ವಾಮಿ ಅವರ ಪ್ರಸ್ತುತ ಆರೋಪಗಳನ್ನು ಅವಕಾಶವಾದಿ ರಾಜಕಾರಣದ ಭಾಗವೆಂದು ಪರಿಗಣಿಸಬೇಕಾಗುತ್ತದೆ ಎಂದು ಟೀಕಿಸಿದ್ದಾರೆ.
ರಾಜ್ಯದ ಹಲವು ಯೋಜನೆಗಳು ಕೇಂದ್ರದ ಅನುಮತಿಗಾಗಿ ಬಾಕಿ ಇವೆ. ಹೀಗಾಗಿ ಕೇಂದ್ರದ ಬೃಹತ್ ಕೈಗಾರಿಕಾ ಸಚಿವರಾಗಿ ರಾಜ್ಯದ ಅಭಿವೃದ್ಧಿ ಹಾಗೂ ಹಿತಾಸಕ್ತಿಯ ಪರವಾಗಿ ಧ್ವನಿ ಎತ್ತಬೇಕು. ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಕಾಂಗ್ರೆಸ್ ವಿರುದ್ಧ ದ್ವೇಷದ ರಾಜಕಾರಣದ ಆರೋಪ ಮಾಡುವುದನ್ನು ಬಿಟ್ಟು ರಾಜ್ಯದ ಸಮಗ್ರ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ತೋರಿಸಬೇಕು ಎಂದು ರಮೇಶ್ ಬಾಬು ಒತ್ತಾಯಿಸಿದ್ದಾರೆ.

