ನವದೆಹಲಿ: ದೇಶದ ಅಂತರ-ರಾಜ್ಯ ವಿದ್ಯುತ್ ಪ್ರಸರಣ ಜಾಲವನ್ನು ಬಲಪಡಿಸುವ ಹಾಗೂ ನವೀಕರಿಸಬಹುದಾದ ಇಂಧನದ ಏಕೀಕರಣಕ್ಕೆ ಉತ್ತೇಜನ ನೀಡುವ ಗ್ರೀನ್ ಎನರ್ಜಿ ಕಾರಿಡಾರ್ ಹಂತ-III (GEC-III) ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅಸ್ತು ನೀಡಲಾಗಿದ್ದು, 2032-33ರ ವೇಳೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 135 ಗಿಗಾವಾಟ್ವರೆಗೆ ನವೀಕರಿಸಬಹುದಾದ ಇಂಧನವನ್ನು ಸ್ಥಳಾಂತರಿಸುವ ಗುರಿ ಹೊಂದಲಾಗಿದೆ.
ಯೋಜನೆಯ ಒಟ್ಟು ಅಂದಾಜು ವೆಚ್ಚ ₹1,86,405 ಕೋಟಿ. ಇದರಲ್ಲಿ ಅಂತರ-ರಾಜ್ಯ ಪ್ರಸರಣ ಮೂಲಸೌಕರ್ಯಕ್ಕೆ ₹1,36,378 ಕೋಟಿ ಹಾಗೂ 50 GWh ಸಾಮರ್ಥ್ಯದ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಗಳಿಗೆ (BESS) ₹50,000 ಕೋಟಿ ಮೀಸಲಿಡಲಾಗಿದೆ.
ಯೋಜನೆಗೆ ಕೇಂದ್ರ ಸರ್ಕಾರ ₹54,082 ಕೋಟಿ ಆರ್ಥಿಕ ನೆರವು ನೀಡಲಿದೆ. ಈ ನೆರವು ಅಂತರ-ರಾಜ್ಯ ಪ್ರಸರಣ ಶುಲ್ಕದ ಹೊರೆ ತಗ್ಗಿಸಲು ಮತ್ತು ಅಂತಿಮವಾಗಿ ಗ್ರಾಹಕರ ಮೇಲಿನ ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.

ನವೀಕರಿಸಬಹುದಾದ ಇಂಧನ ಉತ್ಪಾದನಾ ಕೇಂದ್ರಗಳು ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ BESS ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಸೌರ ಮತ್ತು ಇತರ ನವೀಕರಿಸಬಹುದಾದ ಇಂಧನ ಮೂಲಗಳ ಉತ್ಪಾದನೆಯಲ್ಲಿ ಕಂಡುಬರುವ ಏರಿಳಿತಗಳನ್ನು ನಿರ್ವಹಿಸಲು ಈ ಸಂಗ್ರಹ ವ್ಯವಸ್ಥೆಗಳು ನೆರವಾಗಲಿವೆ.
ಗ್ರಿಡ್ ದಟ್ಟಣೆ ಕಡಿಮೆ ಮಾಡುವುದು, ಗರಿಷ್ಠ ಬೇಡಿಕೆಯ ಅವಧಿಯಲ್ಲಿ ವಿದ್ಯುತ್ ಪೂರೈಕೆಯನ್ನು ನಿರ್ವಹಿಸುವುದು ಹಾಗೂ ಸೌರ ವಿದ್ಯುತ್ ಲಭ್ಯವಿಲ್ಲದ ಸಮಯದಲ್ಲಿ ಬೇಡಿಕೆಯನ್ನು ಪೂರೈಸುವುದಕ್ಕೂ BESS ಸಹಕಾರಿಯಾಗಲಿದೆ.
ಗ್ರೀನ್ಫೀಲ್ಡ್ ಪ್ರಸರಣ ಯೋಜನೆಗಳನ್ನು ಸುಂಕ ಆಧಾರಿತ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಬ್ರೌನ್ಫೀಲ್ಡ್ ಯೋಜನೆಗಳ ನವೀಕರಣ ಮತ್ತು ಜಾಲ ಬಲವರ್ಧನೆ ಕಾಮಗಾರಿಗಳಿಗೆ ವೆಚ್ಚ-ಪ್ಲಸ್ ಮಾದರಿ ಅನುಸರಿಸಲಾಗುತ್ತದೆ. ರಾಜ್ಯ ಪ್ರಸರಣ ಉಪಯುಕ್ತತೆಗಳು ಅನುಷ್ಠಾನದ ಮೇಲ್ವಿಚಾರಣೆ ನಡೆಸಲಿವೆ.
GEC-III, 2035ರ ವೇಳೆಗೆ 900 GW ಸ್ಥಾಪಿತ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ ಸಾಧಿಸುವ ಭಾರತದ ಗುರಿಗೆ ಬೆಂಬಲ ನೀಡಲಿದೆ ಎಂದು ಸರ್ಕಾರ ಹೇಳಿದೆ. ದೀರ್ಘಾವಧಿಯಲ್ಲಿ ಇಂಧನ ಭದ್ರತೆ ಬಲಪಡಿಸುವುದರ ಜತೆಗೆ ಇಂಗಾಲದ ಹೊರಸೂಸುವಿಕೆ ಕಡಿತಕ್ಕೂ ಯೋಜನೆ ಕೊಡುಗೆ ನೀಡಲಿದೆ.
ಇದಲ್ಲದೆ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ದೇಶೀಯ ಬ್ಯಾಟರಿ ಸಂಗ್ರಹ ಉದ್ಯಮಕ್ಕೆ ಉತ್ತೇಜನ ದೊರೆಯುವುದರ ಜತೆಗೆ ಗ್ರಿಡ್ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಕೌಶಲ್ಯಾಧಾರಿತ ಉದ್ಯೋಗಗಳಿಗೂ ಅವಕಾಶ ಸಿಗಲಿದೆ.

