ತುಳು ಭಾಷೆ ಕಲಿಕೆ ಇನ್ನು ಸುಲಭ; ಇಂಗ್ಲಿಷ್, ಕನ್ನಡ ಭಾಷಿಗರಿಗಾಗಿ ಎರಡು ಪರಿಷ್ಕೃತ ಪುಸ್ತಕಗಳ ಬಿಡುಗಡೆ

ಬೆಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ತುಳು ಭಾಷೆ ಕಲಿಯಲು ನೆರವಾಗುವ ಎರಡು ಪುಸ್ತಕಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಬಿಡುಗಡೆ ಮಾಡಿದರು.

ಇಂಗ್ಲಿಷ್ ಭಾಷಿಗರಿಗಾಗಿ ಕೆ.ಟಿ. ಗಟ್ಟಿ ಅವರ ‘ಲರ್ನ್ ತುಳು ನ್ಯಾಚುರಲಿ’ ಹಾಗೂ ಕನ್ನಡ ಭಾಷಿಗರಿಗಾಗಿ ಡಾ. ಯು.ಪಿ. ಉಪಾಧ್ಯಾಯ ಅವರ ‘ತುಳು ಕೈಪಿಡಿ’ ಕೃತಿಗಳ ಪರಿಷ್ಕೃತ ಮುದ್ರಣವನ್ನು ಅಕಾಡೆಮಿ ಹೊರತಂದಿದೆ.

ತುಳು ಭಾಷೆಯನ್ನು ಕರ್ನಾಟಕದ ಹೆಚ್ಚುವರಿ ಆಡಳಿತ ಭಾಷೆಯಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ತುಳು ಕಲಿಯಲು ಆಸಕ್ತಿ ಹೊಂದಿರುವವರಿಂದ ಪುಸ್ತಕಗಳಿಗೆ ಬೇಡಿಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ಕೃತಿಗಳ ಪರಿಷ್ಕೃತ ಆವೃತ್ತಿಗಳನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಸಚಿವರಿಗೆ ಮಾಹಿತಿ ನೀಡಿದರು.

ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ನಡೆದ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾಜಿ ಸಚಿವೆ ಡಾ. ಜಯಮಾಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಶ್ರೀ ಎನ್., ಇಲಾಖೆಯ ನಿರ್ದೇಶಕಿ ಡಾ. ಕೆ.ಎಂ. ವಸುಂಧರ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಲ್ವಾರಿಸ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್. ಹಾಗೂ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ ಉಪಸ್ಥಿತರಿದ್ದರು.

ತುಳು ಭಾಷೆಯ ಕಲಿಕೆ ಮತ್ತು ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಪುಸ್ತಕಗಳು ಸಹಕಾರಿಯಾಗಲಿವೆ ಎಂಬ ಆಶಯವನ್ನು ಅಕಾಡೆಮಿ ವ್ಯಕ್ತಪಡಿಸಿದೆ.

Related posts