ಬೆಂಗಳೂರು: ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ (ಪಿಡಿಎಸ್) ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕೈಗೊಂಡಿರುವ ಡಿಜಿಟಲ್ ಉಪಕ್ರಮಗಳ ಪ್ರಗತಿ ಪರಿಶೀಲನೆ ನಡೆಯಿತು. ಸಚಿವ ರಿಜ್ವಾನ್ ಅರ್ಷದ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇ-ಕೆವೈಸಿ, ‘ಅನ್ನ ಸೇವಾ’ ಮೊಬೈಲ್ ಆ್ಯಪ್, ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ‘ಅನ್ನ ವಾಣಿ’ ಯೋಜನೆ ಹಾಗೂ ವಾಹನಗಳ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆಯ ಪ್ರಗತಿಯನ್ನು ಪರಿಶೀಲಿಸಿದರು.
ರಾಜ್ಯದಲ್ಲಿ ಒಟ್ಟು 2.67 ಕೋಟಿ ಫಲಾನುಭವಿಗಳ ಪೈಕಿ 2.06 ಕೋಟಿ ಮಂದಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಶೇ. 77ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಫಲಾನುಭವಿಗಳಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಆರಂಭಿಸಲಾದ ‘ಅನ್ನ ಸೇವಾ’ ಮೊಬೈಲ್ ಆ್ಯಪ್ ಮೂಲಕ ಬಿಡುಗಡೆಯಾದ ಕೇವಲ 12 ದಿನಗಳಲ್ಲಿ 2.6 ಲಕ್ಷ ಮಂದಿ ಇ-ಕೆವೈಸಿ ಪೂರ್ಣಗೊಳಿಸಿದ್ದಾರೆ. ಆ್ಯಪ್ನ ಬಳಕೆಯನ್ನು ಇನ್ನಷ್ಟು ಸುಗಮಗೊಳಿಸಲು ಎದುರಾಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಪಿಡಿಎಸ್ ಅಡಿಯಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳ ಮೇಲ್ವಿಚಾರಣೆಗೂ ಇಲಾಖೆ ಆದ್ಯತೆ ನೀಡಿದೆ. ಒಟ್ಟು 2,093 ವಾಹನಗಳ ಪೈಕಿ 1,926 ವಾಹನಗಳಿಗೆ ಜಿಪಿಎಸ್ ಸಾಧನಗಳನ್ನು ಅಳವಡಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. ಈ ವ್ಯವಸ್ಥೆಯಿಂದ ಸರಕು ಸಾಗಣೆಯ ಮೇಲ್ವಿಚಾರಣೆ ಹಾಗೂ ವಿತರಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಸಾಧ್ಯವಾಗಲಿದೆ.
ಇದಲ್ಲದೆ, ನಾಗರಿಕರ ಪ್ರಶ್ನೆಗಳಿಗೆ ನೆರವು ನೀಡಲು ಉದ್ದೇಶಿಸಿರುವ ಎಐ ಆಧಾರಿತ ‘ಅನ್ನ ವಾಣಿ’ ಯೋಜನೆ ಮತ್ತು ಕೇಂದ್ರೀಕೃತ ಕಮಾಂಡ್ ಹಾಗೂ ಕಂಟ್ರೋಲ್ ಸೆಂಟರ್ ಸ್ಥಾಪನೆಯ ಪ್ರಗತಿಯನ್ನೂ ಪರಿಶೀಲಿಸಲಾಯಿತು.
ಬಾಕಿ ಉಳಿದಿರುವ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಸೂಚಿಸಿದ ಅರ್ಷದ್, ಸಾರ್ವಜನಿಕರಿಗೆ ಸೇವೆಗಳು ಸುಲಭವಾಗಿ, ದಕ್ಷವಾಗಿ ಮತ್ತು ಪಾರದರ್ಶಕವಾಗಿ ಲಭ್ಯವಾಗಬೇಕು ಎಂದು ಒತ್ತಿಹೇಳಿದರು.
ಸಭೆಯಲ್ಲಿ ಆಹಾರ ಇಲಾಖೆಯ ಕಾರ್ಯದರ್ಶಿ ಕನಗವಳ್ಳಿ, ಆಯುಕ್ತೆ ಬಿ.ಆರ್. ಪೂರ್ಣಿಮಾ, ಕೆಎಸ್ಎಫ್ಸಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ್, ಕಾನೂನು ಮಾಪನಶಾಸ್ತ್ರ ನಿಯಂತ್ರಕ ಸಿ.ಎನ್. ಮಂಜುನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

