ಕೀನ್ಯಾದಲ್ಲಿ ಎಬೋಲಾ ತಲ್ಲಣ: ಸೋಂಕಿತರ ಸಂಖ್ಯೆ 7ಕ್ಕೆ ಏರಿಕೆ

ನೈರೋಬಿ: ಕೀನ್ಯಾದಲ್ಲಿ ಎಬೋಲಾ ಬುಂಡಿಬುಗ್ಯೊ ವೈರಸ್ ಸೋಂಕಿನ ನಾಲ್ಕು ಹೊಸ ಪ್ರಕರಣಗಳು ದೃಢಪಟ್ಟಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ. ಹೊಸದಾಗಿ ಸೋಂಕು ದೃಢಪಟ್ಟವರಲ್ಲಿ ಮೂವರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸದಾಗಿ ಸೋಂಕು ಪತ್ತೆಯಾದ ನಾಲ್ವರು ರೋಗಿಗಳಲ್ಲಿ ಮೊದಲ ಲಕ್ಷಣವಾಗಿ ಜ್ವರ ಕಾಣಿಸಿಕೊಂಡಿತ್ತು. ಸೋಂಕಿತರನ್ನು ಪ್ರತ್ಯೇಕಿಸಿ ತಕ್ಷಣ ಪರೀಕ್ಷೆ ನಡೆಸಲಾಗಿದೆ. ಕೀನ್ಯಾದ ಮೊದಲ ಎಬೋಲಾ ರೋಗಿಯ ನಿಕಟ ಸಂಪರ್ಕದಲ್ಲಿದ್ದ ವ್ಯಕ್ತಿಯ ಪರೀಕ್ಷೆಯೂ ಪಾಸಿಟಿವ್ ಬಂದಿದೆ.

ಕೀನ್ಯಾ ತನ್ನ ಮೊದಲ ಎಬೋಲಾ ಪ್ರಕರಣವನ್ನು ಅಕ್ಟೋಬರ್ 6ರಂದು ವರದಿ ಮಾಡಿತ್ತು. ಏಳು ವರ್ಷಗಳ ಕಾಲ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ವಾಸಿಸಿದ್ದ ಮೊದಲ ಸೋಂಕಿತ ವ್ಯಕ್ತಿ ನೈರೋಬಿಯಲ್ಲಿ ಮೃತಪಟ್ಟಿದ್ದರು. ಅವರಿಗೆ ಸುರಕ್ಷಿತ ಮತ್ತು ಗೌರವಯುತ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು.

ಹೊಸ ಪ್ರಕರಣಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕಿತರನ್ನು ಗುರುತಿಸುವುದು, ಪರೀಕ್ಷೆ ನಡೆಸುವುದು ಮತ್ತು ಸೋಂಕಿತರನ್ನು ಪ್ರತ್ಯೇಕಿಸುವ ಕ್ರಮಗಳಿಗೆ ಆರೋಗ್ಯ ಅಧಿಕಾರಿಗಳು ಆದ್ಯತೆ ನೀಡಿದ್ದಾರೆ.

Related posts