ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಶೀಘ್ರ ಅಂತ್ಯ: ಅಮೇರಿಕ ಸುಳಿವು

ವಾಷಿಂಗ್ಟನ್: ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ನಾಶಪಡಿಸಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಪುನರಾರಂಭಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿರುವ ಅವರು, ಮಿಲಿಟರಿ ಕಾರ್ಯಾಚರಣೆ ಶೀಘ್ರದಲ್ಲೇ ಅಂತ್ಯಗೊಳ್ಳುವ ಸಾಧ್ಯತೆಯನ್ನೂ ವ್ಯಕ್ತಪಡಿಸಿದ್ದಾರೆ.

ಕೆಂಟುಕಿಯಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಟ್ರಂಪ್, ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಪಡೆಯುವುದನ್ನು ತಡೆಯುವುದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಅತ್ಯಗತ್ಯ ಎಂದು ಸಮರ್ಥಿಸಿಕೊಂಡರು. ಕಾರ್ಯಾಚರಣೆಯನ್ನು ಪ್ರಮುಖ ಸಾಧನೆ ಎಂದು ಬಣ್ಣಿಸಿದ ಅವರು, ಅದು ಅಂತ್ಯಗೊಂಡ ಬಳಿಕ ಪೆಟ್ರೋಲ್ ಬೆಲೆಗಳು ಇಳಿಕೆಯಾಗಲಿವೆ ಎಂದು ಭವಿಷ್ಯ ನುಡಿದರು.

ಅಮೆರಿಕದ ರಕ್ಷಣಾ ವೆಚ್ಚ ಒಂದು ಟ್ರಿಲಿಯನ್ ಡಾಲರ್‌ ಮೀರಿರುವುದನ್ನೂ ಉಲ್ಲೇಖಿಸಿದ ಟ್ರಂಪ್, ದೇಶದ ಮಿಲಿಟರಿ ಸಾಮರ್ಥ್ಯವನ್ನು ಶ್ಲಾಘಿಸಿದರು. ವೆನೆಜುವೆಲಾ ಮತ್ತು ಗ್ರೀನ್‌ಲ್ಯಾಂಡ್‌ಗೆ ಸಂಬಂಧಿಸಿದ ಬೆಳವಣಿಗೆಗಳನ್ನೂ ತಮ್ಮ ವಿದೇಶಾಂಗ ನೀತಿ ಹೇಳಿಕೆಗಳಲ್ಲಿ ಪ್ರಸ್ತಾಪಿಸಿದರು.

ಇದೇ ವೇಳೆ, ಪ್ರಾದೇಶಿಕ ಉದ್ವಿಗ್ನತೆ ಮುಂದುವರಿದಿದೆ. ರಿಯಾದ್ ಸೇರಿದಂತೆ ಸೌದಿ ಅರೇಬಿಯಾದ ಪೂರ್ವ ಮತ್ತು ದಕ್ಷಿಣ ಭಾಗಗಳತ್ತ ಬಂದ ನಾಲ್ಕು ಡ್ರೋನ್‌ಗಳನ್ನು ತಡೆಹಿಡಿದಿರುವುದಾಗಿ ಸೌದಿ ನೇತೃತ್ವದ ಒಕ್ಕೂಟ ತಿಳಿಸಿದೆ. ಯೆಮೆನ್‌ನ ಸಾದಾ ಪ್ರಾಂತ್ಯದಲ್ಲಿ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ಯಂತ್ರಗಳನ್ನು ನಾಶಪಡಿಸಿರುವುದಾಗಿಯೂ ಹೇಳಿದೆ.

ದಕ್ಷಿಣ ಯೆಮೆನ್‌ನ ಅಡೆನ್‌ನಲ್ಲಿರುವ ಅಲ್-ಮಾಶಿಕ್ ಅಧ್ಯಕ್ಷೀಯ ಅರಮನೆಯನ್ನು ಐದು ಕ್ಷಿಪಣಿಗಳು ಗುರಿಯಾಗಿಸಿಕೊಂಡಿವೆ ಎಂದು ವರದಿಯಾಗಿದೆ. ದಾಳಿಗೆ ಹೌತಿಗಳನ್ನು ಸ್ಥಳೀಯ ಭದ್ರತಾ ಅಧಿಕಾರಿಯೊಬ್ಬರು ಹೊಣೆಗಾರರನ್ನಾಗಿ ಮಾಡಿದ್ದಾರೆ. ಅರಮನೆಯ ಸಮೀಪ ಸ್ಫೋಟಗಳು ಮತ್ತು ಹೊಗೆ ಕಾಣಿಸಿಕೊಂಡಿರುವ ವರದಿಗಳಿದ್ದರೂ, ಸಾವುನೋವು ಹಾಗೂ ಆಸ್ತಿಪಾಸ್ತಿ ಹಾನಿಯ ವಿವರಗಳು ಸ್ಪಷ್ಟವಾಗಿಲ್ಲ.

ಸೌದಿ ವಾಯುಪ್ರದೇಶ ಮತ್ತು ವಿಮಾನ ನಿಲ್ದಾಣಗಳ ಕುರಿತು ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಹೌತಿಗಳು ಎಚ್ಚರಿಕೆಗಳನ್ನು ನವೀಕರಿಸಿದ್ದಾರೆ. ಆದರೆ ಮೆಕ್ಕಾ ಮತ್ತು ಮದೀನಾದ ವಾಯುಪ್ರದೇಶವನ್ನು ಈ ಎಚ್ಚರಿಕೆಯಿಂದ ಹೊರಗಿಡಲಾಗಿದೆ ಎಂದು ಹೌತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಹೇಳಿದ್ದಾರೆ.

ಗುರುವಾರ ಸೌದಿ ಪ್ರದೇಶದತ್ತ ದಾಳಿ ನಡೆಸಿರುವುದನ್ನು ಹೌತಿಗಳು ನಿರಾಕರಿಸಿದ್ದು, ಮದೀನಾದ ಮೇಲೆ ದಾಳಿ ನಡೆದಿದೆ ಎಂಬ ಸೌದಿ ಆರೋಪಗಳನ್ನೂ ತಳ್ಳಿಹಾಕಿದ್ದಾರೆ. ಪ್ರಾದೇಶಿಕ ಸಂಘರ್ಷದ ನಡುವೆ ಪರಸ್ಪರ ವಿರುದ್ಧದ ಹೇಳಿಕೆಗಳು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿವೆ.

Related posts