ಅಂಟಾಲ್ಯ: ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಹವಾಮಾನ ಹಣಕಾಸು ಬದ್ಧತೆಗಳನ್ನು ಈಡೇರಿಸಬೇಕು ಎಂದು ಭಾರತ ಒತ್ತಾಯಿಸಿದೆ. ಟರ್ಕಿಯ ಅಂಟಾಲ್ಯದಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ COP31ರಲ್ಲಿ ಸಮಾನತೆ ಮತ್ತು ನ್ಯಾಯ ಆಧಾರಿತ ಜಾಗತಿಕ ಹವಾಮಾನ ಕ್ರಮಕ್ಕೆ ಕರೆ ನೀಡಿದೆ.
ನವೆಂಬರ್ 18, 2026ರಂದು ಭಾರತದ ರಾಷ್ಟ್ರೀಯ ಹೇಳಿಕೆ ನೀಡಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್, ಹೆಚ್ಚಿನ ಮಹತ್ವಾಕಾಂಕ್ಷೆಯ ಹೆಸರಿನಲ್ಲಿ ಜಾಗತಿಕ ದಕ್ಷಿಣದ ರಾಷ್ಟ್ರಗಳು ಐತಿಹಾಸಿಕ ಹೊರಸೂಸುವಿಕೆಯ ಹೊರೆ ಹೊರಬೇಕಾಗಿಲ್ಲ ಎಂದು ಹೇಳಿದರು.
ಸುಮಾರು ಎರಡು ಶತಮಾನಗಳ ಕೈಗಾರಿಕೀಕರಣದಿಂದ ಉಂಟಾದ ಹಸಿರುಮನೆ ಅನಿಲ ಹೊರಸೂಸುವಿಕೆಯ ಪರಿಣಾಮಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳು ಭರಿಸುವಂತೆ ಕೇಳುವುದು ಅನ್ಯಾಯ ಎಂದು ಅವರು ಅಭಿಪ್ರಾಯಪಟ್ಟರು. ಹವಾಮಾನ ಕ್ರಮ ಮತ್ತು ಆರೋಗ್ಯ, ಶಿಕ್ಷಣ ಹಾಗೂ ಉತ್ತಮ ಜೀವನಮಟ್ಟದಂತಹ ಅಭಿವೃದ್ಧಿ ಅಗತ್ಯಗಳ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಬರಬಾರದು ಎಂದರು.

ಹವಾಮಾನ ನಿರ್ಧಾರಗಳು ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಸಂಬಂಧಿತ ಸಾಮರ್ಥ್ಯಗಳ (CBDR-RC) ತತ್ವದ ಆಧಾರದಲ್ಲಿರಬೇಕು ಎಂದು ಒತ್ತಾಯಿಸಿದರು. ಹವಾಮಾನ ಕ್ರಮದ ಹೆಸರಿನಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ದಂಡ ವಿಧಿಸುವ ಏಕಪಕ್ಷೀಯ ವ್ಯಾಪಾರ ಕ್ರಮಗಳನ್ನೂ ವಿರೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಹವಾಮಾನ ಬದ್ಧತೆಗಳು 2047ರ ವೇಳೆಗೆ ‘ವಿಕ್ಷಿತ್ ಭಾರತ’ ಗುರಿಗೆ ಪೂರಕವಾಗಿವೆ ಎಂದು ತಿಳಿಸಿದ ಯಾದವ್, COP31ರ ಯಶಸ್ಸು ಹಣಕಾಸು ನೆರವಿನ ವಿತರಣೆ ಮತ್ತು ಪರಿಣಾಮಕಾರಿ ಅನುಷ್ಠಾನದ ಮೇಲೆ ಅವಲಂಬಿತವಾಗಿದೆ ಎಂದರು.

