ಬೆಂಗಳೂರು ಘನತ್ಯಾಜ್ಯ ಟೆಂಡರ್‌ನಲ್ಲಿ ₹350 ಕೋಟಿ ಅಕ್ರಮದ ಆರೋಪ; ಸಮಗ್ರ ತನಿಖೆಗೆ ‘ಸಿಟಿಜನ್ಸ್’ ದೂರು,

ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಕೈಗೊಂಡಿರುವ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು ₹350 ಕೋಟಿ ಸಾರ್ವಜನಿಕ ಹಣ ದುರ್ಬಳಕೆಯಾಗಿರುವ ಸಾಧ್ಯತೆಯಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ವತಂತ್ರ ಉನ್ನತ ಮಟ್ಟದ ತನಿಖೆ ನಡೆಸುವಂತೆ ಸಿಟಿಜನ್ ರೈಟ್ಸ್ ಫೌಂಡೇಶನ್ (CRF) ಸಿಟಿಜನ್ ರೈಟ್ಸ್ ಫೌಂಡೇಶನ್ (CRF) ಅಧ್ಯಕ್ಷ ಕೆ.ಎ.ಪಾಲ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಏನಿದು ಹಗರಣ ಆರೋಪ:

  • BSWML ಟೆಂಡರ್‌ನಲ್ಲಿ ₹350 ಕೋಟಿ ಅಕ್ರಮದ ಆರೋಪ. ಸಾರ್ವಜನಿಕ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಆರೋಪಿಸಿರುವ CRF. ₹2,500 ಕೋಟಿ ಟೆಂಡರ್‌ಗೆ ₹350 ಕೋಟಿ ಪ್ರೀಮಿಯಂ ವಿಧಿಸಿರುವುದಕ್ಕೆ ಆಕ್ಷೇಪ. ಅಂದಾಜು ಮೊತ್ತಕ್ಕಿಂತ ಶೇ.14ರಷ್ಟು ಹೆಚ್ಚಿನ ದರದಲ್ಲಿ ಗುತ್ತಿಗೆ ಆರೋಪ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಕೆ. ಸಿಎಜಿ ಮತ್ತು ಪ್ರಧಾನ ಮಹಾಲೇಖಪಾಲರಿಗೂ ದೂರು.

ಟೆಂಡರ್ ಪ್ರಕ್ರಿಯೆಯಲ್ಲಿ ವಿಧಾನ ಪರಿಷತ್ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ CRF ಈ ಹಿಂದೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಎಜಿ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಗೂ ದೂರು ಸಲ್ಲಿಸಿರುವುದರಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ನವೆಂಬರ್ 12ರಂದು ಸಲ್ಲಿಸಿರುವ ಮನವಿಯಲ್ಲಿ, 2025ರ ಜುಲೈ 30ರಂದು ಪ್ರಕಟಿಸಿದ್ದ 33 ಪ್ಯಾಕೇಜ್‌ಗಳ ಟೆಂಡರ್ ಹಾಗೂ 2026ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಹೊರಡಿಸಲಾದ ನಂತರದ ಟೆಂಡರ್‌ಗಳ ಸಮಗ್ರ ಪರಿಶೀಲನೆಗೆ ಆಗ್ರಹಿಸಲಾಗಿದೆ.

ಟೆಂಡರ್‌ನ ಅಂದಾಜು ಮೊತ್ತಕ್ಕಿಂತ ಶೇ 14ರಷ್ಟು ಹೆಚ್ಚಿನ ದರದಲ್ಲಿ ಗುತ್ತಿಗೆ ನೀಡಲಾಗಿದೆ ಅಥವಾ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಸಾರ್ವಜನಿಕ ಬೊಕ್ಕಸಕ್ಕೆ ಸುಮಾರು ₹350 ಕೋಟಿ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಯಿದೆ ಎಂದು CRF ಆರೋಪಿಸಿದೆ. ಹಣಕಾಸು ಇಲಾಖೆಯ ಆಕ್ಷೇಪಣೆಗಳು, ಸರ್ಕಾರ ನೇಮಿಸಿದ್ದ ಸಮಿತಿಗಳ ವರದಿಗಳು, ಟೆಂಡರ್ ತಿದ್ದುಪಡಿಗಳು ಮತ್ತು ಅರ್ಹತಾ ಮಾನದಂಡಗಳ ಬದಲಾವಣೆಗಳ ಬಗ್ಗೆಯೂ ತನಿಖೆ ನಡೆಸುವಂತೆ ಕೋರಿದೆ.

BSWMLನ ಉಪ ಪ್ರಧಾನ ವ್ಯವಸ್ಥಾಪಕ-1 ಚಂದ್ರಶೇಖರ್, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರ ಜವಾಬ್ದಾರಿ, ಶಿಫಾರಸು, ಅನುಮೋದನೆ ಮತ್ತು ನಿರ್ಧಾರಗಳನ್ನು ಪರಿಶೀಲಿಸಬೇಕು. ಗುತ್ತಿಗೆದಾರರು ಮತ್ತು ಬಿಡ್‌ದಾರರ ಪಾತ್ರವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 22ರಿಂದ ಜಾರಿಯಲ್ಲಿದ್ದ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಸೆಪ್ಟೆಂಬರ್ 19, 23 ಮತ್ತು ಅಕ್ಟೋಬರ್ 8ರಂದು ಟೆಂಡರ್ ಅಧಿಸೂಚನೆ ಹೊರಡಿಸಿರುವುದು ಹಾಗೂ ಕೆಲವು ಪ್ಯಾಕೇಜ್‌ಗಳಿಗೆ ಕಾರ್ಯಾದೇಶ ನೀಡಿರುವುದರ ಕಾನೂನುಬದ್ಧತೆಯನ್ನು ಪರಿಶೀಲಿಸುವಂತೆಯೂ ಆಗ್ರಹಿಸಲಾಗಿದೆ.

ಸಿಎಜಿಗೂ ದೂರು: 33 ಪ್ಯಾಕೇಜ್‌ಗಳ ಟೆಂಡರ್ ಕುರಿತು ಸಮಗ್ರ ಲೆಕ್ಕಪರಿಶೋಧನೆ ನಡೆಸುವಂತೆ ಸಿಎಜಿ ಮತ್ತು ಕರ್ನಾಟಕದ ಪ್ರಧಾನ ಮಹಾಲೇಖಪಾಲರಿಗೆ CRF ಮನವಿ ಸಲ್ಲಿಸಿದೆ. ಸುಮಾರು ₹2,500 ಕೋಟಿ ಮೂಲ ಟೆಂಡರ್ ಮೊತ್ತದ ಮೇಲೆ ₹350 ಕೋಟಿ ಪ್ರೀಮಿಯಂ ವಿಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ವಾಹನ ಬಾಡಿಗೆ, ಇಂಧನ, ನಿರ್ವಹಣೆ, ಕಾರ್ಮಿಕರ ವೇತನ, ಗುತ್ತಿಗೆದಾರರ ಅರ್ಹತೆ ಮತ್ತು ಪ್ಯಾಕೇಜ್ ಹಂಚಿಕೆಯನ್ನೂ ಪರಿಶೀಲಿಸುವಂತೆ ಕೋರಿದೆ. ಅಕ್ರಮದ ಸಾಕ್ಷ್ಯ ದೊರೆತರೆ ತನಿಖಾ ಸಂಸ್ಥೆಗಳಿಗೆ ಪ್ರಕರಣ ವಹಿಸಿ, ಅಗತ್ಯವಿದ್ದಲ್ಲಿ ಟೆಂಡರ್ ರದ್ದು ಅಥವಾ ಮರು ಟೆಂಡರ್ ನಡೆಸಬೇಕು ಎಂದು ಒತ್ತಾಯಿಸಿದೆ.

Related posts