ಬೆಂಗಳೂರು: ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಕೈಗೊಂಡಿರುವ ಘನತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಟೆಂಡರ್ ಪ್ರಕ್ರಿಯೆಯಲ್ಲಿ ಸುಮಾರು ₹350 ಕೋಟಿ ಸಾರ್ವಜನಿಕ ಹಣ ದುರ್ಬಳಕೆಯಾಗಿರುವ ಸಾಧ್ಯತೆಯಿದೆ ಎಂದು ಆರೋಪಿಸಿರುವ ಸಿಟಿಜನ್ ರೈಟ್ಸ್ ಫೌಂಡೇಶನ್ (CRF), ಈ ಕುರಿತು ಸ್ವತಂತ್ರ ಉನ್ನತ ಮಟ್ಟದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಈ ಟೆಂಡರ್ ಪ್ರಕ್ರಿಯೆ ಸಂದರ್ಭದಲ್ಲಿ MLC ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಚುನಾವಣಾ ಆಯೋಗಕ್ಕೆ CRF ದೂರು ಸಲ್ಲಿಸಿತ್ತು. ಇದೀಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಕ್ಷಮ ಪ್ರಾಧಿಕಾರಗಳಿಗೂ ದೂರು ಸಲ್ಲಿಸಲಾಗಿದೆ. ಹಾಗಾಗಿ ಈ ಪ್ರಕರಣವು ಮತ್ತೊಂದು ಮಜಲಿಗೆ ತಲುಪಿದೆ.
2026ರ ನವೆಂಬರ್ 12ರಂದು ಸಲ್ಲಿಸಿರುವ ಮನವಿಯಲ್ಲಿ, 2025ರ ಜುಲೈ 30ರಂದು ಪ್ರಕಟಿಸಿದ್ದ 33 ಪ್ಯಾಕೇಜ್ಗಳ ಟೆಂಡರ್ ಸೇರಿದಂತೆ 2026ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಹೊರಡಿಸಿದ ನಂತರದ ಟೆಂಡರ್ಗಳನ್ನೂ ಪರಿಶೀಲಿಸುವಂತೆ ಕೋರಿದೆ.

ಟೆಂಡರ್ನ ಅಂದಾಜು ಮೊತ್ತಕ್ಕಿಂತ ಶೇ 14ರಷ್ಟು ಹೆಚ್ಚಿನ ದರದಲ್ಲಿ ಗುತ್ತಿಗೆ ನೀಡಲಾಗಿದೆ ಅಥವಾ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಸಾರ್ವಜನಿಕ ಬೊಕ್ಕಸಕ್ಕೆ ಸುಮಾರು ₹350 ಕೋಟಿ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆಯಿದೆ ಎಂದು ಪ್ರತಿಷ್ಠಾನ ಆರೋಪಿಸಿದೆ. ಹಣಕಾಸು ಇಲಾಖೆಯ ಆಕ್ಷೇಪಣೆಗಳು, ಸರ್ಕಾರ ನೇಮಿಸಿದ್ದ ಸಮಿತಿಗಳ ವರದಿಗಳು, ಟೆಂಡರ್ ತಿದ್ದುಪಡಿಗಳು ಹಾಗೂ ಅರ್ಹತಾ ಮಾನದಂಡಗಳ ಬದಲಾವಣೆಗಳ ಬಗ್ಗೆಯೂ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.
BSWMLನ ಉಪ ಪ್ರಧಾನ ವ್ಯವಸ್ಥಾಪಕ-1 ಚಂದ್ರಶೇಖರ್, ಮುಖ್ಯ ಪ್ರಧಾನ ವ್ಯವಸ್ಥಾಪಕ ಎಸ್.ವಿ. ರಾಜೇಶ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ಅವರ ಜವಾಬ್ದಾರಿ, ಶಿಫಾರಸು, ಅನುಮೋದನೆ ಹಾಗೂ ನಿರ್ಧಾರಗಳನ್ನು ಪರಿಶೀಲಿಸಬೇಕು. ಗುತ್ತಿಗೆದಾರರು ಮತ್ತು ಬಿಡ್ದಾರರ ಪಾತ್ರವನ್ನೂ ತನಿಖೆಗೆ ಒಳಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ 2026ರ ಸೆಪ್ಟೆಂಬರ್ 22ರಿಂದ ಜಾರಿಯಲ್ಲಿದ್ದ ಮಾದರಿ ನೀತಿ ಸಂಹಿತೆ ಅವಧಿಯಲ್ಲಿ ಸೆಪ್ಟೆಂಬರ್ 19, 23 ಮತ್ತು ಅಕ್ಟೋಬರ್ 8ರಂದು ಹೊಸ ಟೆಂಡರ್ ಅಧಿಸೂಚನೆ ಹೊರಡಿಸಿರುವುದು ಹಾಗೂ ಕೆಲವು ಪ್ಯಾಕೇಜ್ಗಳಿಗೆ ಕಾರ್ಯಾದೇಶ ನೀಡಿರುವುದರ ಕಾನೂನುಬದ್ಧತೆಯನ್ನು ಪರಿಶೀಲಿಸುವಂತೆಯೂ ಕೋರಿದೆ.
ಟೆಂಡರ್ ದಾಖಲೆಗಳು, ಹಣಕಾಸು ಬಿಡ್ಗಳು, ಸಮಿತಿ ವರದಿಗಳು, ಅನುಮೋದನೆಗಳು ಮತ್ತು ಡಿಜಿಟಲ್ ದಾಖಲೆಗಳನ್ನು ಸಂರಕ್ಷಿಸಬೇಕು. ಅಕ್ರಮಕ್ಕೆ ಪ್ರಾಥಮಿಕ ಸಾಕ್ಷ್ಯ ದೊರೆತರೆ ಪ್ರಕರಣವನ್ನು ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ವಹಿಸಬೇಕು. ಕಾನೂನು ಉಲ್ಲಂಘನೆ ದೃಢಪಟ್ಟಲ್ಲಿ ಟೆಂಡರ್ ರದ್ದುಪಡಿಸುವುದು, ಮಾರ್ಪಡಿಸುವುದು ಅಥವಾ ಮರು ಟೆಂಡರ್ ಕರೆಯುವ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಷ್ಠಾನ ಆಗ್ರಹಿಸಿದೆ.
ಸಿಎಜಿಗೂ ದೂರು: 33 ಪ್ಯಾಕೇಜ್ಗಳ ಟೆಂಡರ್ನಲ್ಲಿ ಅಕ್ರಮ ನಡೆದಿರುವ ಸಾಧ್ಯತೆಯ ಕುರಿತು ಸಮಗ್ರ ಲೆಕ್ಕಪರಿಶೋಧನೆ ನಡೆಸುವಂತೆ ಸಿಟಿಜನ್ ರೈಟ್ಸ್ ಫೌಂಡೇಶನ್, ಸಿಎಜಿ ಮತ್ತು ಕರ್ನಾಟಕದ ಪ್ರಧಾನ ಮಹಾಲೇಖಪಾಲರಿಗೆ ದೂರು ಸಲ್ಲಿಸಿದೆ. 2025ರ ಜುಲೈ 30ರ ಟೆಂಡರ್ನ ಸುಮಾರು ₹2,500 ಕೋಟಿ ಮೂಲ ಮೊತ್ತದ ಮೇಲೆ ₹350 ಕೋಟಿ ಪ್ರೀಮಿಯಂ ವಿಧಿಸಿರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ವಾಹನ ಬಾಡಿಗೆ, ಇಂಧನ, ನಿರ್ವಹಣೆ, ಕಾರ್ಮಿಕರ ವೇತನ, ಗುತ್ತಿಗೆದಾರರ ಅರ್ಹತೆ ಮತ್ತು ಪ್ಯಾಕೇಜ್ ಹಂಚಿಕೆಯನ್ನೂ ಪರಿಶೀಲಿಸುವಂತೆ ಕೋರಿದೆ.

