ನಿತ್ಯೋತ್ಸವ ಕವಿ ನಿಸಾರ್ ಅಹಮ್ಮದ್ ವಿಧಿವಶ; ಗಣ್ಯರ ಶೋಕ

ಬೆಂಗಳೂರು: ಕನ್ನಡ ನಾಡಿನ ಹಿರಿಯ ಸಾಹಿತಿ, ನಿತ್ಯೋತ್ಸವ ಕವಿ ಎಂದೇ ಖ್ಯಾತರಾಗಿರುವ ಪ್ರೊಪೆಸರ್ ಕೆ.ಎಸ್.ನಿಸಾರ್ ಅಹಮ್ಮದ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ೮೪ ವರ್ಷ ವಯಸ್ಸಿನ ನಿಸಾರ್ ಅಹಮ್ಮದ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ 1936ರ ಫೆಬ್ರವರಿ 5ರಂದು ಜನಿಸಿದ್ದ ನಿಸಾರ್ ಅಹಮ್ಮದ್, ಕಥೆ-ಕವನ-ಕವಿತೆಗಳ ಮೂಲಕ ಸಾರಸ್ವತ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.

ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ,
ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ,
ನಿತ್ಯ ಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ…

ಇದು ಕರುನಾಡ ಮಂದಿಯ ಅಚ್ಚುಮೆಚ್ಚಿನ ಗೀತೆಯಾಗಿದೆ. ಈ ಹಾಡಿನಿಂದಾಗಿಯೇ ಪ್ರೊ.ನಿಸಾರ್ ಅಹಮ್ಮದ್ ಅವರು ನಿತ್ಯೋತ್ಸವ ಕವಿ ಎಂದೇ ಖ್ಯಾತರಾದವರು.

ಯುವ ಸಾಹಿತಿಗಳಿಗೆ ಸ್ಪೂರ್ತಿಯ ಸೆಲೆಯಾಗಿದ್ದ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೊರೂರು ಪ್ರಶಸ್ತಿ, ಅನಕೃ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ ಸಹಿತ ಹತ್ತಾರು ಪುಸಾಸ್ಕಾರಗಳಿಗೆ ಪಾತ್ರರಾಗಿದ್ದರು.

ಪ್ರೊಪೆಸರ್ ಕೆ.ಎಸ್.ನಿಸಾರ್ ಅಹಮ್ಮದ್ ಅವರ ನಿಧನದಿಂದಾಗಿ ಕನ್ನಡ ಸಾರಸ್ವತ ಲೋಕ ಬಡವಾಗಿದ್ದು, ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ.. ಆಕ್ರೋಶಕ್ಕೆ ಬೆಚ್ಚಿದ ಸರ್ಕಾರ; ಉಚಿತ ಬಸ್ ಸೇವೆ ಘೋಷಣೆ

 

Related posts