ಅಪಾರ್ಟ್’ಮೆಂಟ್’ಗೆ ಹೊರಗಿನವರಿಗೆ ಪ್ರವೇಶ ನಿಷಿದ್ಧ. ಹಾಗಾಗಿ ಈ ಯುವಕ ತನ್ನ ಸ್ನೇಹಿತನನ್ನು ಸೂಟ್’ಕೇಸಿನಲ್ಲಿ ಕೂರಿಸಿ ಕರೆದೊಯ್ದಾಗ ಆಗಿದ್ದೇ ಫಜೀತಿ.. ಪ್ರಜ್ಞಾವಂತರ ನಾಡಲ್ಲಿ ನಡೆದ ಹೈಡ್ರಾಮಾ ಹೇಗಿದೆ ನೋಡಿ..
ಮಂಗಳೂರು: ಕೊರೋನಾ ವಕ್ಕರಿಸಿರುವ ಈ ಸೂಕ್ಷ್ಮ ಸಮಯದಲ್ಲಿ ವೈರಾಣು ಹರಡುವುದನ್ನು ತಡೆಯಲು ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಜನ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ನಿರ್ಬಂಧವಿದೆ. ಅದರಲ್ಲೂ ಅಪಾರ್ಟ್’ಮೆಂಟ್ ಪ್ರವೇಶಕ್ಕಂತೂ ಅನ್ಯರಿಗೆ ಪ್ರವೇಶವೇ ಇಲ್ಲ.
ಇಂತಹಾ ಸ್ಥಿತಿಯಲ್ಲಿ ಮಂಗಳೂರಿನ ಯುವಕನೊಬ್ಬ ಖತರ್ನಾಕ್ ಐಡಿಯಾ ಮಾಡಿ ಪೊಲೀಸರ ಅತಿಥಿಯಾದ ಪ್ರಸಂಗ ನಡೆದಿದೆ.
ಏನಿದು ಪ್ರಹಸನ?
ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಉಳಿಯಬೇಕಾದ ಅನಿವಾರ್ಯತೆ. ಇದರಿಂದ ತುಂಬಾ ಬೋರು. ಹಾಗಾಗಿ ಸ್ನೇಹಿತನೊಬ್ಬನನ್ನು ತನ್ನ ಫ್ಲಾಟ್’ಗೆ ಕರೆಸಿಕೊಳ್ಳಲು ನಿರ್ಧರಿಸಿದ್ದಾನೆ ಆ ಯುವಕ. ಮಂಗಳೂರಿನ ಆರ್ಯಸಮಾಜ ಸಮೀಪದ ಅಪಾರ್ಟ್’ಮೆಂಟ್’ನಲ್ಲಿರುವ ಈತನ ಫ್ಲಾಟ್’ಗೆ ಬರಲು ಸ್ನೇಹಿತ ರೆಡಿ ಇದ್ದರೂ ಅಪಾರ್ಟ್ಮೆಂಟ್ ಮೇಲ್ವಿಚಾರಕರು ಅವಕಾಶ ನಿರಾಕರಿಸಿದ್ದರು. ಇದರಿಂದ ಕುಪಿತನಾದ ಆತ ಹೇಗಾದರೂ ಸ್ನೇಹಿತನನ್ನು ಮನೆಗೆ ಕರೆಸಿಕೊಳ್ಳಲೇಬೇಕು ಎಂದು ಹಟಕ್ಕಿಳಿದ.
ಅಪಾರ್ಟ್’ಮೆಂಟ್’ನಿಂದ ಹೊರ ಹೋದ ಈತ ಬಳಿಕ ಸೂಟ್’ಕೇಸ್ ಜೊತೆ ವಾಪಾಸಾಗಿದ್ದಾನೆ. ಸೆಕ್ಯುರಿಟಿ ಸಿಬ್ಬಂದಿ ಎಲ್ಲಾ ರೀತಿ ಪರಿಶೀಲನೆ ನಡೆಸಿದರೂ ಈತನ ಬಗ್ಗೆ ಯಾವುದೇ ಅನುಮಾನ ಬರಲಿಲ್ಲ. ಆದರೆ ಆತ ಆ ಸ್ಥಳದಿಂದ ಫ್ಲಾಟ್’ನತ್ತ ಹೊರಡಲು ಅಣಿಯಾಗತ್ತಿದ್ದಾಗ ಸೂಟ್’ಕೇಸ್ ಸ್ವಲ್ಪ ಅಲುಗಾಡಿದೆ. ಅದಾಗಲೇ ಅನುಮಾನ ಬಂದು ಸೂಟ್’ಕೇಸ್ ಓಪನ್ ಮಾಡಿಸಿ ಪರಿಶೀಲಿಸಿದಾಗ ಅದರೊಳಗೊಬ್ಬ ಹುಡುಗ ಪ್ರತ್ಯಕ್ಷನಾಗಿದ್ದಾನೆ.
ಪ್ರಹಸನಕ್ಕೆ ಪೊಲೀಸ್ ಎಂಟ್ರಿ
ಈತನ ರಾದ್ದಾಂತದಿಂದ ಆ ಅಪಾರ್ಟ್’ಮೆಂಟ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸ್ ಠಾಣೆವರೆಗೂ ಮಾಹಿತಿ ರವಾನೆಯಾಯಿತು. ಅಷ್ಟೇ ಅಲ್ಲ ಈ ಸೂಟ್’ಕೇಸ್ ಪ್ರಹಸನದಲ್ಲಿ ಎಂಟ್ರಿ ಕೊಟ್ಟ ಕದ್ರಿ ಠಾಣೆಯ ಪೊಲೀಸರು ಆ ಇಬ್ಬರನ್ನೂ ಠಾಣೆಗೆ ಕರೆಸಿಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆ. ಏನೋ ಮಾಡಲು ಹೋಗಿ ಏನೋ ಆದ ಕಥೆಗೆ ಈ ಯುವಕನ ಸೂಟ್’ಕೇಸ್ ಪ್ರಹಸನ ಸಾಕ್ಷಿಯಾಯಿತು.