ವಾಯುಸೇನಾ ಮುಖ್ಯಸ್ಥರಾಗಿ ‘ಆಪರೇಷನ್ ಸಿಂದೂರ್’ ಹೀರೊ ಅಶುತೋಷ್ ದೀಕ್ಷಿತ್ ನೇಮಕ

ನವದೆಹಲಿ: ಪ್ರಸ್ತುತ ವಾಯುಸೇನಾ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರನ್ನು ಭಾರತೀಯ ವಾಯುಪಡೆಯ 29ನೇ ಮುಖ್ಯಸ್ಥರಾಗಿ ಸರ್ಕಾರ ನೇಮಿಸಿದೆ. ಅವರು ‘ಏರ್ ಚೀಫ್ ಮಾರ್ಷಲ್’ ಹುದ್ದೆಯ ಶ್ರೇಣಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಪ್ರಸ್ತುತ ವಾಯುಸೇನಾ ಮುಖ್ಯಸ್ಥರಾಗಿರುವ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ಅಕ್ಟೋಬರ್ 31ರಂದು ನಿವೃತ್ತರಾಗಲಿದ್ದು, ಅದೇ ದಿನ ಮಧ್ಯಾಹ್ನ ದೀಕ್ಷಿತ್ ಅವರು ನೂತನ ವಾಯುಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

1966ರ ಡಿಸೆಂಬರ್ 9ರಂದು ಜನಿಸಿದ ದೀಕ್ಷಿತ್ ಅವರು 1986ರ ಡಿಸೆಂಬರ್ 6ರಂದು ಭಾರತೀಯ ವಾಯುಪಡೆಯ ಫೈಟರ್ ವಿಭಾಗಕ್ಕೆ ನಿಯೋಜನೆಗೊಂಡಿದ್ದರು. ವಾಯುಸೇನಾ ಉಪ ಮುಖ್ಯಸ್ಥರಾಗುವ ಮೊದಲು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥ ಹಾಗೂ ಸೆಂಟ್ರಲ್ ಏರ್ ಕಮಾಂಡ್‌ನ ಏರ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಬಾಂಗ್ಲಾದೇಶದ ಡಿಫೆನ್ಸ್ ಸರ್ವಿಸಸ್ ಕಮಾಂಡ್ ಅಂಡ್ ಸ್ಟಾಫ್ ಕಾಲೇಜು ಹಾಗೂ ನ್ಯಾಷನಲ್ ಡಿಫೆನ್ಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ದೀಕ್ಷಿತ್, ಮಿರಾಜ್-2000, ವಿವಿಧ ಮಿಗ್ ಮಾದರಿಗಳು, ಕಿರಣ್, ಜಾಗ್ವಾರ್, ಐಎಲ್-78, ಹಾಕ್ ಮತ್ತು ತೇಜಸ್ ಸೇರಿದಂತೆ ವಿವಿಧ ವಿಮಾನಗಳಲ್ಲಿ 3,500 ಗಂಟೆಗೂ ಅಧಿಕ ಹಾರಾಟದ ಅನುಭವ ಹೊಂದಿದ್ದಾರೆ.

ಪ್ರಾಯೋಗಿಕ ಪರೀಕ್ಷಾ ಪೈಲಟ್ ಮತ್ತು ಅರ್ಹ ಹಾರಾಟ ಬೋಧಕರಾಗಿರುವ ಅವರು ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್ ಹಾಗೂ ಆಪರೇಷನ್ ಸಿಂದೂರ್ ಸೇರಿದಂತೆ ಹಲವು ಕಾರ್ಯಾಚರಣೆ ಮತ್ತು ಸಮರಾಭ್ಯಾಸಗಳಲ್ಲಿ ಭಾಗವಹಿಸಿದ್ದಾರೆ.

ಸುಮಾರು ನಾಲ್ಕು ದಶಕಗಳ ಸೇವಾವಧಿಯಲ್ಲಿ ಪಶ್ಚಿಮ ವಲಯದ ಮುಂಚೂಣಿ ಫೈಟರ್ ಏರ್‌ಬೇಸ್ ಹಾಗೂ ದಕ್ಷಿಣ ವಲಯದ ಪ್ರಮುಖ ಫೈಟರ್ ತರಬೇತಿ ನೆಲೆಗಳ ಕಮಾಂಡ್ ಸೇರಿದಂತೆ ಹಲವು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ವಿಶಿಷ್ಟ ಸೇವೆಗಾಗಿ ದೀಕ್ಷಿತ್ ಅವರಿಗೆ ವಾಯು ಸೇನಾ ಪದಕ (2006), ವಿಶಿಷ್ಟ ಸೇವಾ ಪದಕ (2011), ಅತಿ ವಿಶಿಷ್ಟ ಸೇವಾ ಪದಕ (2023) ಹಾಗೂ ಪರಮ ವಿಶಿಷ್ಟ ಸೇವಾ ಪದಕ (2026) ನೀಡಿ ಗೌರವಿಸಲಾಗಿದೆ.

Related posts