ಬಳ್ಳಾರಿ: ಶೋಷಿತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಕಲ್ಯಾಣ ಕರ್ನಾಟಕದ ಹಕ್ಕುಗಳಿಗಾಗಿ ಬಿಜೆಪಿ ಹಮ್ಮಿಕೊಂಡಿದ್ದ ‘ಬಳ್ಳಾರಿ ಚಲೋ’ ಐತಿಹಾಸಿಕ ಹೋರಾಟವಾಗಿ ಯಶಸ್ವಿಯಾಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ. ರವಿ ಹೇಳಿದ್ದಾರೆ.
ಲಿಂಗಸುಗೂರಿನಿಂದ ಆರಂಭಗೊಂಡು ಒಂಬತ್ತು ವಿಧಾನಸಭಾ ಕ್ಷೇತ್ರಗಳ ಮೂಲಕ ಸಾಗಿದ ಪಾದಯಾತ್ರೆ ಬಳ್ಳಾರಿಯಲ್ಲಿ ಬೃಹತ್ ಜನಸಮಾವೇಶದೊಂದಿಗೆ ಸಮಾರೋಪಗೊಂಡಿತು. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ಆಡಳಿತ ಹಾಗೂ ವಿವಿಧ ವಿಚಾರಗಳ ವಿರುದ್ಧ ಧ್ವನಿ ಎತ್ತಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ಎಸ್ಸಿಪಿ-ಟಿಎಸ್ಪಿ ಅನುದಾನ ದುರ್ಬಳಕೆ ತಡೆಯಬೇಕು’
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿದೆ ಎಂದು ಆರೋಪಿಸಿದ ಸಿ.ಟಿ. ರವಿ, ಇದರಿಂದ ಬಡವರು ಹಾಗೂ ಪರಿಶಿಷ್ಟ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ರೈತ ಸಮುದಾಯಕ್ಕೆ ಸರ್ಕಾರದಿಂದ ಆಗಿರುವ ಅನ್ಯಾಯ ಸರಿಪಡಿಸಬೇಕು. ಎಸ್ಸಿಪಿ-ಟಿಎಸ್ಪಿ ಅನುದಾನದ ದುರ್ಬಳಕೆ ತಡೆಯಬೇಕು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಈ ಬೇಡಿಕೆಗಳು ಈಡೇರುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಅವರು ಹೇಳಿದರು.
‘ಬಳ್ಳಾರಿ ಚಲೋ’ ಮೂಲಕ ಬಳ್ಳಾರಿಯಲ್ಲಿ ಮೊಳಗಿರುವ ಜನಾಕ್ರೋಶದ ಧ್ವನಿ, ರಾಜ್ಯ ಸರ್ಕಾರವನ್ನು ಕೆಳಗಿಳಿಸುವವರೆಗೆ ಮುಂದುವರಿಯಲಿದೆ ಎಂದು ಸಿ.ಟಿ. ರವಿ ಎಚ್ಚರಿಕೆ ನೀಡಿದರು.

ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಸಹ ಉಸ್ತುವಾರಿ ಪೊಂಗುಲೇಟಿ ಸುಧಾಕರ್ ರೆಡ್ಡಿ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ. ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವ ಬಿ. ಶ್ರೀರಾಮುಲು, ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಶಾಸಕರು, ಸಂಸದರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

