ಜೈಲು ಕೈದಿಯ ಜೊತೆ ವಿಡಿಯೋ ಕಾಲ್ ಆರೋಪ: ಮಹಿಳಾ ಪಿಎಸ್‌ಐ ಜಯಶ್ರೀ ಅಮಾನತು

ಬೆಳಗಾವಿ: ಹಿಂಡಲಗಾ ಜೈಲಿನ ವಿಚಾರಣಾಧೀನ ಕೈದಿಯೊಂದಿಗೆ ಅಕ್ರಮ ಸಂಪರ್ಕ ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಪಿಎಸ್‌ಐ ಜಯಶ್ರೀ ಅವರನ್ನು ಅಮಾನತುಗೊಳಿಸಲಾಗಿದೆ.

ಜೈಲಿನಲ್ಲಿರುವ ಕುಣಿಗಲ್ ಮೂಲದ ವಿಚಾರಣಾಧೀನ ಕೈದಿ ಹಾಗೂ ರೌಡಿಶೀಟರ್ ಸೈಕುಮಾರ್ ಅಲಿಯಾಸ್ ಸುರೇಶ್ ಜೊತೆ ಜಯಶ್ರೀ ವಿಡಿಯೋ ಕಾಲ್‌ನಲ್ಲಿ ಮಾತನಾಡಿರುವ ಆರೋಪದ ವಿಡಿಯೋ ಹಾಗೂ ಆಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರಿಂದ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇದರ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸೂಚನೆ ಮೇರೆಗೆ ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲಾಗಿತ್ತು. ತನಿಖೆ ವೇಳೆ ಕೈದಿ ಹಾಗೂ ಆತನ ಕುಟುಂಬದವರ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿರುವ ಬಗ್ಗೆ ಚಾಟ್‌ಗಳು ಹಾಗೂ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.

ಅಲ್ಲದೆ, ಕೈದಿಗೆ ಸಂಬಂಧಿಸಿದ ಸ್ಕೂಟರ್ ಮತ್ತು ಸ್ವಿಫ್ಟ್ ಕಾರು ಜಯಶ್ರೀ ಅವರ ಹೆಸರಿಗೆ ವರ್ಗಾವಣೆಯಾಗಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೈದಿಯ ವಿರುದ್ಧ ಎನ್‌ಕೌಂಟರ್ ನಡೆಸುವ ಕುರಿತು ಜಯಶ್ರೀ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕೂಡ ವೈರಲ್ ಆಗಿತ್ತು. ಆದರೆ ಈ ಆಡಿಯೋ, ವಿಡಿಯೋ ಹಾಗೂ ಇತರ ದಾಖಲೆಗಳ ಸತ್ಯಾಸತ್ಯತೆ ಮತ್ತು ಸಂಪೂರ್ಣ ಸಂದರ್ಭದ ಬಗ್ಗೆ ತನಿಖೆ ಮುಂದುವರಿದಿದೆ.

ಇಲಾಖಾ ತನಿಖೆಯಲ್ಲಿ ಕರ್ತವ್ಯಲೋಪ, ಶಿಸ್ತು ಉಲ್ಲಂಘನೆ ಹಾಗೂ ಅಧಿಕಾರದ ದುರ್ಬಳಕೆಯ ಆರೋಪಗಳಿಗೆ ಪ್ರಾಥಮಿಕ ಆಧಾರ ಕಂಡುಬಂದ ಹಿನ್ನೆಲೆಯಲ್ಲಿ ಆಂತರಿಕ ಭದ್ರತಾ ವಿಭಾಗದ ಐಜಿಪಿ ಕೆ. ತ್ಯಾಗರಾಜನ್ ಅವರು ಜಯಶ್ರೀ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಆರೋಪಗಳು ಇನ್ನಷ್ಟೇ ಅಧಿಕೃತವಾಗಿ ದೃಢಪಡಬೇಕಿದೆ.

Related posts