ಟಿಬೆಟ್‌ನಲ್ಲಿ 5.0 ತೀವ್ರತೆಯ ಭೂಕಂಪ: ಪ್ರವಾಹದ ಬಳಿಕ ಹಿಮಾಲಯ ವಲಯದಲ್ಲಿ ಮತ್ತೊಂದು ಆತಂಕ!

ಕಠ್ಮಂಡು : ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹದಿಂದ ತತ್ತರಿಸಿರುವ ಹಿಮಾಲಯ ವಲಯದಲ್ಲಿ ಇದೀಗ ಭೂಕಂಪವೂ ಸಂಭವಿಸಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.

ನೇಪಾಳ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ನ ಗಡಿ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ 5.0 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಭೂಮಿಯ ಸುಮಾರು 14 ಕಿ.ಮೀ ಆಳದಲ್ಲಿ ಕಂಪನ ದಾಖಲಾಗಿದೆ.

ಭೂಕಂಪದಿಂದ ಸದ್ಯಕ್ಕೆ ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಈಗಾಗಲೇ ಪ್ರವಾಹದ ಸಂಕಷ್ಟ ಎದುರಿಸುತ್ತಿರುವ ಪ್ರದೇಶದಲ್ಲಿ ಭೂಕಂಪ ಸಂಭವಿಸಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಇದೇ ವೇಳೆ ಆಗಸ್ಟ್ 26ರಂದು ಟಿಬೆಟ್-ನೇಪಾಳ ಗಡಿಯಲ್ಲಿ ಸಂಭವಿಸಿದ ಹಿಮಪಾತ ಹಾಗೂ ಹಿಮನದಿ ಕುಸಿತದಿಂದ ಉಂಟಾದ ಭೀಕರ ಪ್ರವಾಹದ ಸಾವಿನ ಸಂಖ್ಯೆ 1,252ಕ್ಕೆ ಏರಿಕೆಯಾಗಿದೆ.

ರಕ್ಷಣಾ ಪಡೆಗಳ ಕಾರ್ಯಾಚರಣೆ ಮುಂದುವರಿದಿದ್ದು, ಚಿತ್ವಾನ್‌ನಲ್ಲಿ ಅತಿ ಹೆಚ್ಚು 355 ಮೃತದೇಹಗಳು ಪತ್ತೆಯಾಗಿವೆ.

ನವಲ್ಪರಾಸಿ ಪೂರ್ವದಲ್ಲಿ 218, ನವಲ್ಪರಾಸಿ ಪಶ್ಚಿಮದಲ್ಲಿ 208, ನುವಾಕೋಟ್‌ನಲ್ಲಿ 177, ರಸುವಾದಲ್ಲಿ 127, ಗೂರ್ಖಾದಲ್ಲಿ 69, ಧಾಡಿಂಗ್‌ನಲ್ಲಿ 60 ಹಾಗೂ ತನಾಹುದಲ್ಲಿ 38 ಮೃತದೇಹಗಳನ್ನು ಹೊರತೆಗೆಯಲಾಗಿದೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯವೂ ನಡೆಯುತ್ತಿದೆ.

Related posts