ಸಾರಿಗೆ ಬಸ್ ಪ್ರಯಾಣ ದರ ಏರಿಕೆಕೆಗೆ ಪ್ರತಿಪಕ್ಷ ಆಕ್ರೋಶ; ನವೆಂಬರ್ 5ರಂದು ರಾಜ್ಯವ್ಯಾಪಿ ಪ್ರತಿಭಟನೆಗೆ ಕರೆ

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ ₹5,650.95 ಕೋಟಿ ಬಾಕಿ ಉಳಿಸಿಕೊಂಡಿದ್ದು, ಈ ಹಣ ಪಾವತಿಸಿದ್ದರೆ ಬಸ್ ಪ್ರಯಾಣ ದರ ಏರಿಸುವ ಅಗತ್ಯವಿರಲಿಲ್ಲ. ಸರ್ಕಾರದ ವೈಫಲ್ಯದ ಹೊರೆ ಇದೀಗ ಜನರ ಮೇಲೆ ಹಾಕಲಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್‌. ಅಶೋಕ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲೇ ದಾಖಲೆ ಎನ್ನುವ ರೀತಿಯಲ್ಲಿ ಬಸ್ ಟಿಕೆಟ್ ದರ ಹೆಚ್ಚಿಸಲಾಗಿದೆ. ಕೆಲವು ಮಾರ್ಗಗಳಲ್ಲಿ ಶೇ.40ರಷ್ಟು ಏರಿಕೆಯಾಗಿದೆ. ದೀಪಾವಳಿ ಸಂದರ್ಭದಲ್ಲಿ ಜನರಿಗೆ ನೆಮ್ಮದಿ ನೀಡುವ ಬದಲು ಆರ್ಥಿಕ ಹೊರೆ ಹಾಕಲಾಗಿದೆ ಎಂದು ಟೀಕಿಸಿದರು.

ಕೆಎಸ್‌ಆರ್‌ಟಿಸಿಗೆ ₹2,943 ಕೋಟಿ, ಎನ್‌ಡಬ್ಲ್ಯುಕೆಆರ್‌ಟಿಸಿಗೆ ₹1,306 ಕೋಟಿ, ಬಿಎಂಟಿಸಿಗೆ ₹1,019 ಕೋಟಿ ಹಾಗೂ ಕೆಕೆಆರ್‌ಟಿಸಿಗೆ ₹999 ಕೋಟಿ ಬಾಕಿ ಪಾವತಿಸಬೇಕಿದೆ ಎಂದು ಅವರು ಹೇಳಿದರು.

ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ ಬಿಎಂಟಿಸಿ ಪ್ರಯಾಣ ದರ ₹12ರಿಂದ ₹18ಕ್ಕೆ, ಮೆಜೆಸ್ಟಿಕ್‌ನಿಂದ ಯಶವಂತಪುರಕ್ಕೆ ₹18ರಿಂದ ₹25ಕ್ಕೆ ಹೆಚ್ಚಾಗಿದೆ. ಬೆಂಗಳೂರು-ತುಮಕೂರು ಪ್ರಯಾಣ ದರ ₹81ರಿಂದ ₹100ಕ್ಕೆ ಏರಿಕೆಯಾಗಿದೆ. ಬೆಂಗಳೂರು-ಮೈಸೂರು, ಹಾಸನ ಮತ್ತು ಚಿಕ್ಕಮಗಳೂರು ಮಾರ್ಗಗಳಲ್ಲೂ ದರ ಹೆಚ್ಚಳವಾಗಿದೆ ಎಂದು ವಿವರಿಸಿದರು.

ಸಾರಿಗೆ ನಿಗಮಗಳ ಮೇಲೆ ಪಿಎಫ್‌ ಬಾಕಿ ₹2,901.53 ಕೋಟಿ ಹಾಗೂ ಇಂಧನ ಬಾಕಿ ₹827.37 ಕೋಟಿ ಇದೆ. ಬಿಡಿಭಾಗಗಳ ಖರೀದಿಗೂ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ತಮ್ಮ ಸಾರಿಗೆ ಸಚಿವರ ಅವಧಿಯಲ್ಲಿ ನಿಗಮಗಳು ಲಾಭದಲ್ಲಿದ್ದವು ಮತ್ತು 1,110 ಎಕರೆ ಜಮೀನು ಖರೀದಿಸಿ ಭೂ ಬ್ಯಾಂಕ್ ನಿರ್ಮಿಸಲಾಗಿತ್ತು ಎಂದು ತಿಳಿಸಿದರು.

ಹಾಲಿನ ಪ್ರೋತ್ಸಾಹಧನವನ್ನು ₹7ಕ್ಕೆ ಹೆಚ್ಚಿಸುವ ಭರವಸೆ ನೀಡಿದ್ದ ಸರ್ಕಾರ, ಅದರ ಬದಲು ಗ್ರಾಹಕರ ಮೇಲೆ ದರ ಏರಿಕೆಯ ಹೊರೆ ಹಾಕಿದೆ ಎಂದು ಅಶೋಕ ಆರೋಪಿಸಿದರು. ಹಾಲು, ಮೊಸರು ಸೇರಿದಂತೆ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಹೆಚ್ಚಳದಿಂದ ಕುಟುಂಬಗಳ ಮಾಸಿಕ ವೆಚ್ಚ ಹೆಚ್ಚಲಿದೆ ಎಂದರು.

ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡಬೇಕು. ಸಾರಿಗೆ ನಿಗಮಗಳ ಬಾಕಿ ಪಾವತಿಸಿ, ಜನರ ಮೇಲಿನ ಹೊರೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಬಿಜೆಪಿ ನವೆಂಬರ್ 5ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಆರ್‌. ಅಶೋಕ ಘೋಷಿಸಿದರು. ಸಾರ್ವಜನಿಕರು ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

Related posts