ಸಂವಿಧಾನಕ್ಕೆ ಧಕ್ಕೆ ತಂದವರಿಂದಲೇ ‘ಪ್ರಜಾಪ್ರಭುತ್ವ ಉಳಿಸಿ’ ಹೋರಾಟದ ನಾಟಕ: ಪದ್ಮರಾಜ್ ಟೀಕೆ

ಮಂಗಳೂರು: ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಲಗೊಳಿಸಿ, ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡ ಬಿಜೆಪಿ ಈಗ ‘ಪ್ರಜಾಪ್ರಭುತ್ವ ಉಳಿಸಿ’ ಎಂದು ಹೋರಾಟ ನಡೆಸುತ್ತಿರುವುದು ದೊಡ್ಡ ಗಿಮಿಕ್ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಟೀಕಿಸಿದ್ದಾರೆ.

ಮತದಾನದ ಹಕ್ಕು ಕಸಿದುಕೊಳ್ಳುವ ಪ್ರಯತ್ನಗಳ ವಿರುದ್ಧ ರಾಹುಲ್ ಗಾಂಧಿ ಅವರು ‘ವೋಟ್ ಚೋರಿ’ ವಿಚಾರವನ್ನು ಬಯಲಿಗೆಳೆದು ಹೋರಾಟ ನಡೆಸುತ್ತಿದ್ದಾರೆ. ಇದರಿಂದ ದೇಶಾದ್ಯಂತ ಜನರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಜಾಗೃತರಾಗಿದ್ದಾರೆ. ಈ ಜನಾಂದೋಲನದಿಂದ ಕಂಗೆಟ್ಟಿರುವ ಬಿಜೆಪಿ, ಜನರ ಗಮನ ಬೇರೆಡೆ ಸೆಳೆಯಲು ಹೋರಾಟದ ಮುಖವಾಡ ಧರಿಸಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜಕೀಯ ಸಮಾವೇಶದಲ್ಲಿ ಕುಣಿತ ಭಜನೆಗೆ ಆಕ್ಷೇಪ

ಬಿಜೆಪಿ ಮಂಗಳೂರು ವಿಭಾಗದ ರಾಜಕೀಯ ಸಮಾವೇಶದಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಕುಣಿತ ಭಜನೆ ಮಾಡಿಸಿರುವುದಕ್ಕೂ ಪದ್ಮರಾಜ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಜನೆ ಭಕ್ತಿ ಮತ್ತು ಸಮರ್ಪಣೆಯ ಪವಿತ್ರ ಆಧ್ಯಾತ್ಮಿಕ ಸಾಧನೆಯಾಗಿದ್ದು, ಅದನ್ನು ರಾಜಕೀಯ ಸಮಾವೇಶದ ಆಕರ್ಷಣೆಯಾಗಿ ಬಳಸಿರುವುದು ಭಕ್ತಿ ಪರಂಪರೆಗೆ ಮಾಡಿದ ಅಪಚಾರ ಎಂದು ಹೇಳಿದ್ದಾರೆ.

ರಾಜಕಾರಣವು ಜನರ ಸಮಸ್ಯೆಗಳು, ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ವಿಚಾರಗಳ ಆಧಾರದಲ್ಲಿ ನಡೆಯಬೇಕೇ ಹೊರತು ಧಾರ್ಮಿಕ ನಂಬಿಕೆಗಳನ್ನು ಮತಬ್ಯಾಂಕ್‌ಗಾಗಿ ಬಳಸಿಕೊಳ್ಳಬಾರದು. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ ದೈವಭಕ್ತಿಯನ್ನು ರಾಜಕೀಯ ಪ್ರಚಾರದ ಸರಕಾಗಿಸುವುದು ಸರಿಯಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ಸುಳ್ಳು ಸುದ್ದಿಗಳ ಮೂಲಕ ಜನರ ದಾರಿ ತಪ್ಪಿಸುವ ರಾಜಕಾರಣವನ್ನು ಬಿಜೆಪಿ ಮುಂದುವರಿಸುತ್ತಿದೆ. ಇಂತಹ ಪ್ರಯತ್ನಗಳನ್ನು ರಾಜ್ಯದ ಪ್ರಜ್ಞಾವಂತ ನಾಗರಿಕರು ಒಪ್ಪುವುದಿಲ್ಲ ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.

Related posts