ಬೆಂಗಳೂರು: ಪೆಟ್ರೋಲ್, ಡೀಸೆಲ್ ಬಳಕೆಯಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ಮತ್ತು ಕಚ್ಚಾ ತೈಲ ಆಮದು ಅವಲಂಬನೆ ಕಡಿಮೆ ಮಾಡಲು ಎಥನಾಲ್ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ಮಹಾರಾಷ್ಟ್ರ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪಾಸಾ ಪಟೇಲ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಕಬ್ಬಿನಿಂದ ಎಥನಾಲ್ ಉತ್ಪಾದನೆ ಮತ್ತು ಬಳಕೆ ಕುರಿತ ರೈತ ಸಹಕಾರಿ ವಿಚಾರ ಸಂಕಿರಣವನ್ನು ಎಥನಾಲ್ ಎಣ್ಣೆಯಿಂದ ಬೆಳಗುವ ದೀಪ ಹಚ್ಚುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದ ಮಂಡ್ಯ ಜಿಲ್ಲೆಯ ಮೈಸೂರು ಶುಗರ್ ಕಾರ್ಖಾನೆಯಲ್ಲಿ 1840ರಲ್ಲೇ ಕಬ್ಬಿನಿಂದ ಉತ್ಪನ್ನ ತಯಾರಿಸಿ ಮುಂಬೈಗೆ ರವಾನಿಸಿ, ಪೆಟ್ರೋಲ್‌ನೊಂದಿಗೆ ಮಿಶ್ರಣ ಮಾಡಿ ಬಸ್‌ಗಳಲ್ಲಿ ಬಳಸಲಾಗುತ್ತಿತ್ತು ಎಂದು ಪಾಸಾ ಪಟೇಲ್ ಹೇಳಿದರು. ಮಂಡ್ಯ ಮತ್ತು ಕರ್ನಾಟಕದಲ್ಲಿ ಈ ರೀತಿಯ ಪ್ರಯೋಗಗಳು ನಡೆದಿರುವುದು ಹೆಮ್ಮೆಯ ಸಂಗತಿ ಎಂದರು.

ಎಥನಾಲ್ ಉತ್ಪಾದನೆ ಹಾಗೂ ಬಳಕೆಗೆ ಮೊದಲೇ ಆದ್ಯತೆ ದೊರೆತಿದ್ದರೆ ಅದರ ಮಾಲೀಕತ್ವ ರೈತರ ಕೈಯಲ್ಲೇ ಇರುತ್ತಿತ್ತು. ರೈತರ ಜಮೀನಿನಲ್ಲೇ ಪರ್ಯಾಯ ಇಂಧನ ಉತ್ಪಾದನೆಯ ಸಾಧ್ಯತೆ ಬಗ್ಗೆ ಮೊದಲೇ ಅರಿವು ಮೂಡಿದ್ದರೆ ಕೃಷಿಕರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.
‘ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಯಾಗಲಿ’
ಪೆಟ್ರೋಲ್ ಮತ್ತು ಡೀಸೆಲ್ ಬಳಕೆಯಿಂದ ಇಂಗಾಲದ ಹೊರಸೂಸುವಿಕೆ ಹೆಚ್ಚಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತಿದೆ. ಅರಣ್ಯ ನಾಶ ಹಾಗೂ ವಾಯುಮಾಲಿನ್ಯದಿಂದ ಮಳೆಯ ಸ್ವರೂಪದಲ್ಲೂ ಬದಲಾವಣೆ ಕಾಣಿಸುತ್ತಿದ್ದು, ಬರಗಾಲದಂತಹ ಪರಿಸ್ಥಿತಿಗೆ ಕಾರಣವಾಗುತ್ತಿದೆ ಎಂದು ಪಾಸಾ ಪಟೇಲ್ ಹೇಳಿದರು.
ಎಥನಾಲ್ ಬಳಕೆಯನ್ನು ಹೆಚ್ಚಿಸುವುದರಿಂದ ವಾಯುಮಾಲಿನ್ಯ ಮತ್ತು ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಸಾಧ್ಯ. ನಗರ ಪ್ರದೇಶಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಇಂಧನದ ಬಳಕೆಗೆ ಆದ್ಯತೆ ನೀಡಬೇಕು ಎಂದರು.
ಎಥನಾಲ್ ಉತ್ಪಾದನೆ ಮತ್ತು ಬಳಕೆ ಕುರಿತು ಇದೇ ತಿಂಗಳ 28 ಮತ್ತು 29ರಂದು ಮುಂಬೈನಲ್ಲಿ ರಾಷ್ಟ್ರೀಯ ರೈತ ಸಮಾವೇಶ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
‘E20ರಿಂದ ವಿದೇಶಿ ವಿನಿಮಯ ಉಳಿತಾಯ’
ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಮಾಲಿನ್ಯರಹಿತ ಪರಿಸರ ನಿರ್ಮಾಣ ಮತ್ತು ಕೃಷಿ ವಲಯಕ್ಕೆ ಬಲ ನೀಡಲು ಎಥನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಮತ್ತಷ್ಟು ಯೋಜನೆಗಳನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.

ಕಬ್ಬು, ಮೆಕ್ಕೆಜೋಳ, ಅಕ್ಕಿ ಸೇರಿದಂತೆ ವಿವಿಧ ಬೆಳೆಗಳಿಂದ ಎಥನಾಲ್ ಉತ್ಪಾದಿಸಬಹುದು. ರೈತರ ಆಲೆಮನೆಗಳಲ್ಲೇ ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಅಗತ್ಯ ತಂತ್ರಜ್ಞಾನ ಒದಗಿಸಬೇಕು. ಅಡುಗೆ ಬಳಕೆಯಲ್ಲೂ ಪರ್ಯಾಯ ಇಂಧನವಾಗಿ ಬಳಸುವ ಸಾಧ್ಯತೆಗಳ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.
ದೇಶದಲ್ಲಿ ವಾರ್ಷಿಕ ಸುಮಾರು 1,700ರಿಂದ 1,800 ಕೋಟಿ ಲೀಟರ್ ಎಥನಾಲ್ ಉತ್ಪಾದನಾ ಸಾಮರ್ಥ್ಯವಿದೆ. ಕರ್ನಾಟಕದಲ್ಲಿ 56ಕ್ಕೂ ಹೆಚ್ಚು ಉತ್ಪಾದನಾ ಘಟಕಗಳು/ಡಿಸ್ಟಿಲರಿಗಳಿದ್ದು, ವಾರ್ಷಿಕ ಸುಮಾರು 135 ಕೋಟಿ ಲೀಟರ್ ಉತ್ಪಾದನೆಯೊಂದಿಗೆ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಪೆಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣವನ್ನು ಶೇ.20ಕ್ಕೆ (E20) ಹೆಚ್ಚಿಸುವುದರಿಂದ ಕಚ್ಚಾ ತೈಲ ಆಮದು ಮೇಲಿನ ಅವಲಂಬನೆ ಕಡಿಮೆಯಾಗಲಿದೆ. ಇದರಿಂದ ಸುಮಾರು ₹4 ಲಕ್ಷ ಕೋಟಿ ವಿದೇಶಿ ವಿನಿಮಯ ಉಳಿತಾಯವಾಗುವ ಸಾಧ್ಯತೆಯಿದೆ ಎಂದರು.
ಎಥನಾಲ್ ಕೇವಲ ಪರ್ಯಾಯ ಇಂಧನವಲ್ಲ; ಹಸಿರು ಭವಿಷ್ಯ ಮತ್ತು ಸ್ವಾವಲಂಬನೆಯ ಸಂಕೇತ. ಎಥನಾಲ್ ಕುರಿತು ತಪ್ಪು ಸಂದೇಶ ನೀಡುವುದನ್ನು ನಿಲ್ಲಿಸಿ, ಜೈವಿಕ ಇಂಧನ ಬಳಕೆಗೆ ಬೆಂಬಲ ನೀಡಬೇಕು ಎಂದು ಅವರು ಹೇಳಿದರು.
ಎಥನಾಲ್ ಉತ್ಪಾದನಾ ಸಂಶೋಧಕ ಹಾಗೂ ನಿವೃತ್ತ ಪ್ರಾಧ್ಯಾಪಕ ಹರಿಣಿಕುಮಾರ್ ಮಾತನಾಡಿ, ಕಬ್ಬಿನ ಮೊಲಾಸಿಸ್, ಗೋಧಿ, ಮೆಕ್ಕೆಜೋಳ, ಭತ್ತದ ಸಿಪ್ಪೆ ಸೇರಿದಂತೆ ಕೃಷಿ ಉತ್ಪನ್ನಗಳ ತ್ಯಾಜ್ಯದಿಂದಲೂ ಕಡಿಮೆ ವೆಚ್ಚದಲ್ಲಿ ಎಥನಾಲ್ ಉತ್ಪಾದಿಸಬಹುದು ಎಂದರು. ಕೊಯ್ಲಿನ ಬಳಿಕ ಸುಡಲಾಗುವ ಕೃಷಿ ತ್ಯಾಜ್ಯವನ್ನು ಎಥನಾಲ್ ಉತ್ಪಾದನೆಗೆ ಬಳಸಿದರೆ ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಲಿದೆ ಎಂದು ಹೇಳಿದರು.
ಮುಂದಿನ ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಕಲ್ಲಿದ್ದಲು ಬೆಲೆ ಹೆಚ್ಚಾಗುವ ಸಾಧ್ಯತೆಯಿದ್ದು, ಪರ್ಯಾಯ ಇಂಧನದತ್ತ ಈಗಿನಿಂದಲೇ ಗಮನ ಹರಿಸಬೇಕಿದೆ. ಎಥನಾಲ್ ಉತ್ಪಾದನೆ ಹೆಚ್ಚಿಸುವುದು ಜನಸಾಮಾನ್ಯರು ಮತ್ತು ರೈತರಿಗೆ ಅನುಕೂಲಕರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ, ಅಲ್ಯೂಮಿನಿಯಂ ಅಸೋಸಿಯೇಷನ್ ಅಧ್ಯಕ್ಷ ಎಚ್.ಎಲ್. ಹರೀಶ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಬೆಳಗಾಂವ್ಕರ್, ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಸೇರಿದಂತೆ ಹಲವರು ಭಾಗವಹಿಸಿದ್ದರು.

