ಸ್ಫೋಟಕ ವಸ್ತುಗಳ ಆನ್‌ಲೈನ್ ಪಟ್ಟಿಗಳ ವಿರುದ್ಧ CCPA ಕ್ರಮ: ಮೂರು ಸಂಸ್ಥೆಗಳಿಗೆ ₹30 ಲಕ್ಷ ದಂಡ

ನವದೆಹಲಿ: ಅಮೋನಿಯಂ ನೈಟ್ರೇಟ್, ಗನ್‌ಪೌಡರ್, ಪಿಕ್ರಿಕ್ ಆಮ್ಲ ಮತ್ತು ಪೆಂಟಾಎರಿಥ್ರಿಟಾಲ್ ಟೆಟ್ರಾನೈಟ್ರೇಟ್ (PETN) ಸೇರಿದಂತೆ ನಿಯಂತ್ರಿತ ಸ್ಫೋಟಕ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಪಟ್ಟಿ ಮಾಡಿದ್ದಕ್ಕಾಗಿ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) ಏಳು ಡಿಜಿಟಲ್ ವೇದಿಕೆಗಳ ವಿರುದ್ಧ ಕ್ರಮ ಕೈಗೊಂಡಿದೆ. ಈ ಕ್ರಮದ ಬಳಿಕ ಒಟ್ಟು 3,940 ಮಾರಾಟಗಾರರ ಪಟ್ಟಿಗಳು ಮತ್ತು ನಮೂದುಗಳನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಗ್ರಾಹಕರ ಸುರಕ್ಷತೆ, ಸಾರ್ವಜನಿಕ ಹಿತಾಸಕ್ತಿ ಹಾಗೂ ನಿಯಂತ್ರಿತ ವಸ್ತುಗಳ ಮಾರಾಟಕ್ಕೆ ಸಂಬಂಧಿಸಿದ ಕಾನೂನುಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವುದು ಕ್ರಮದ ಉದ್ದೇಶವಾಗಿದೆ.

CCPA, ಗ್ರಾಹಕ ಸಂರಕ್ಷಣಾ ಕಾಯ್ದೆ-2019 ಮತ್ತು ಇ-ಕಾಮರ್ಸ್ ನಿಯಮಗಳು-2020ರ ಅಡಿಯಲ್ಲಿ, ಸ್ಫೋಟಕಗಳ ಕಾಯ್ದೆ-1884 ಹಾಗೂ ಅಮೋನಿಯಂ ನೈಟ್ರೇಟ್ ನಿಯಮಗಳು-2012 ಸೇರಿದಂತೆ ಅನ್ವಯವಾಗುವ ಕಾನೂನುಗಳ ಆಧಾರದಲ್ಲಿ ಕ್ರಮ ಕೈಗೊಂಡಿದೆ.

ನಿಯಂತ್ರಿತ ಸ್ಫೋಟಕ ವಸ್ತುಗಳ ಕಾನೂನುಬದ್ಧ ಮಾರಾಟ ಮತ್ತು ಖರೀದಿಗೆ ಅಗತ್ಯ ಪರವಾನಗಿಗಳು ಇರಬೇಕು ಎಂದು CCPA ಸ್ಪಷ್ಟಪಡಿಸಿದೆ. ಆನ್‌ಲೈನ್ ವೇದಿಕೆಗಳು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (PESO) ನೀಡಿದ ಮಾನ್ಯ ಪರವಾನಗಿಗಳ ವಿವರಗಳನ್ನು ಬಹಿರಂಗಪಡಿಸಬೇಕು. ವಹಿವಾಟಿಗೆ ಅವಕಾಶ ನೀಡುವ ಮೊದಲು ಖರೀದಿದಾರರ ಗುರುತು ಮತ್ತು ಪರವಾನಗಿ ಹೊಂದಿರುವುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದೆ.

IndiaMARTನಲ್ಲಿ 3,092 ಮಾರಾಟಗಾರರ ನಮೂದುಗಳು ಪತ್ತೆಯಾಗಿದ್ದವು. ExportersIndiaನಲ್ಲಿ 421, TradeIndiaನಲ್ಲಿ 210 ಪಟ್ಟಿಗಳು, Justdialನಲ್ಲಿ 206 ಹಾಗೂ Dial4Tradeನಲ್ಲಿ 11 ನಮೂದುಗಳಿದ್ದವು. Sigma-Aldrich ಮತ್ತು Ibuychemikals ತಮ್ಮದೇ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಅವುಗಳಲ್ಲಿ ಮೂರನೇ ವ್ಯಕ್ತಿಯ ಮಾರಾಟಗಾರರು ಇರಲಿಲ್ಲ ಎಂದು ಸರ್ಕಾರ ತಿಳಿಸಿದೆ.

ಮೂರು ಸಂಸ್ಥೆಗಳಿಗೆ ತಲಾ ₹10 ಲಕ್ಷ ದಂಡ

ಅಮೋನಿಯಂ ನೈಟ್ರೇಟ್ ಮಾರಾಟಕ್ಕೆ ಅವಕಾಶ ನೀಡಿದ ಪ್ರಕರಣದಲ್ಲಿ Dial4Trade Technologies Private Limitedಗೆ ₹10 ಲಕ್ಷ ದಂಡ ವಿಧಿಸಲಾಗಿದೆ. ಸಂಬಂಧಿತ ಪಟ್ಟಿಗಳನ್ನು ತೆಗೆದುಹಾಕಿ, ಇಂತಹ ವಸ್ತುಗಳ ಮಾರಾಟಕ್ಕೆ ನೆರವಾಗುವುದನ್ನು ನಿಲ್ಲಿಸುವಂತೆ ನಿರ್ದೇಶಿಸಲಾಗಿದೆ. ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ (NCDRC)ದಲ್ಲಿ ಸಲ್ಲಿಸಿದ್ದ ಮೇಲ್ಮನವಿಯನ್ನು ಅಕ್ಟೋಬರ್ 9, 2026ರಂದು ವಜಾಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅಮೋನಿಯಂ ನೈಟ್ರೇಟ್ ಮತ್ತು PETNಗೆ ಸಂಬಂಧಿಸಿದ ಪ್ರಕರಣದಲ್ಲಿ ExportersIndia ನಿರ್ವಹಿಸುವ ವೆಬ್‌ಲಿಂಕ್.ಇನ್ ಪ್ರೈವೇಟ್ ಲಿಮಿಟೆಡ್‌ಗೆ ₹10 ಲಕ್ಷ ದಂಡ ವಿಧಿಸಲಾಗಿದೆ. ಪಿಕ್ರಿಕ್ ಆಮ್ಲಕ್ಕೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲೂ ಇದೇ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಲಾಗಿದೆ. ಈ ಎರಡೂ ಆದೇಶಗಳ ವಿರುದ್ಧ ಕಂಪನಿ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ಬಾಕಿಯಿದೆ.

IndiaMART ಮತ್ತು Justdialಗೆ ಸಂಬಂಧಿಸಿದ ಪ್ರಕರಣಗಳು ವಿವಿಧ ಹಂತಗಳಲ್ಲಿವೆ. IndiaMART ದೆಹಲಿ ಹೈಕೋರ್ಟ್‌ನಲ್ಲಿ ಶೋಕಾಸ್ ನೋಟಿಸ್‌ಗಳನ್ನು ಪ್ರಶ್ನಿಸಿದೆ. Justdial ಪ್ರಕರಣದ ಅಂತಿಮ ವಿಚಾರಣೆಯನ್ನು ಅಕ್ಟೋಬರ್ 23, 2026ಕ್ಕೆ ನಿಗದಿಪಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. Sigma-Aldrich India, TradeIndia ಮತ್ತು Ibuychemikals ವಿರುದ್ಧವೂ ವಿವಿಧ ಸ್ಫೋಟಕ ವಸ್ತುಗಳ ಪಟ್ಟಿಗಳಿಗೆ ಸಂಬಂಧಿಸಿದ ತನಿಖೆಗಳು ಮುಂದುವರಿದಿವೆ.

ನಿಯಂತ್ರಿತ ಹಾಗೂ ಅಪಾಯಕಾರಿ ವಸ್ತುಗಳಿಗೆ ಡಿಜಿಟಲ್ ಮಾರುಕಟ್ಟೆಗಳ ಮೂಲಕ ಅನಧಿಕೃತ ಪ್ರವೇಶ ದೊರೆಯುವುದನ್ನು ತಡೆಯಲು ಕ್ರಮ ಮುಂದುವರಿಯಲಿದೆ ಎಂದು CCPA ತಿಳಿಸಿದೆ. ಇಂತಹ ಆನ್‌ಲೈನ್ ಪಟ್ಟಿಗಳನ್ನು ಗಮನಿಸಿದ ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ಮೂಲಕ ದೂರು ನೀಡಲು ಅವಕಾಶ ಇದೆ.

Related posts