ಮೀನಾಕ್ಷಿ ದೇಗುಲಕ್ಕೆ ವಿಜಯ್ ಭೇಟಿ? ಹಿಂದೂ ಧರ್ಮದ ಮೇಲಿನ ನಂಬಿಕೆ ಬಗ್ಗೆ ಘೋಷಣಾ ಪತ್ರಕ್ಕೆ ಸಹಿ ಹಾಕ್ತಾರಾ ಸಿಎಂ?

ಮಧುರೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೆಪ್ಟೆಂಬರ್ 28ರಂದು ಮಧುರೈಯ ಪ್ರಸಿದ್ಧ ಮೀನಾಕ್ಷಿ ಅಮ್ಮನ್ ದೇವಾಲಯಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಧುರೈಗೆ ಅವರು ಕೈಗೊಳ್ಳುತ್ತಿರುವ ಮೊದಲ ಅಧಿಕೃತ ಭೇಟಿ ಇದಾಗಿದೆ. ದೇವಾಲಯ ಭೇಟಿ ಕುರಿತು ಸಿದ್ಧತೆಗಳು ನಡೆಯುತ್ತಿದ್ದು, ಅಂತಿಮ ವೇಳಾಪಟ್ಟಿ ಇನ್ನೂ ಅಧಿಕೃತವಾಗಿ ಖಚಿತವಾಗಿಲ್ಲ ಎಂದು ತಿಳಿದುಬಂದಿದೆ.

ದೇವಾಲಯದ ಅಧಿಕಾರಿಗಳ ಪ್ರಕಾರ, ಮೀನಾಕ್ಷಿ ಅಮ್ಮನ್ ಮತ್ತು ಸುಂದರೇಶ್ವರರ ಗರ್ಭಗುಡಿಗಳಿಗೆ ಹಿಂದೂಗಳಿಗೆ ಮಾತ್ರ ಪ್ರವೇಶವಿದೆ. ಹೀಗಾಗಿ ಮುಖ್ಯಮಂತ್ರಿ ವಿಜಯ್ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಲು ಹಿಂದೂ ಧರ್ಮದ ಮೇಲಿನ ತಮ್ಮ ನಂಬಿಕೆಯನ್ನು ಘೋಷಿಸುವ ಪತ್ರಕ್ಕೆ ಸಹಿ ಹಾಕಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂ ಧರ್ಮದ ಮೇಲಿನ ನಂಬಿಕೆಯನ್ನು ಘೋಷಿಸುವ ಅರ್ಜಿ ಅಥವಾ ಘೋಷಣಾ ಪತ್ರ ಸಲ್ಲಿಸಿದ ಬಳಿಕ ಹಿಂದೂಯೇತರರಿಗೆ ದೇವಾಲಯದ ಒಳಭಾಗ ಪ್ರವೇಶಕ್ಕೆ ಅವಕಾಶ ನೀಡುವ ಕುರಿತು ಹಿಂದಿನ ನ್ಯಾಯಾಲಯದ ನಿರ್ದೇಶನಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಮುಖ್ಯಮಂತ್ರಿ ವಿಜಯ್ ಅವರ ದೇವಾಲಯ ಭೇಟಿ ಹಾಗೂ ಘೋಷಣಾ ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಕಚೇರಿಯಿಂದ ಯಾವುದೇ ಅಂತಿಮ ದೃಢೀಕರಣ ಇನ್ನೂ ಹೊರಬಿದ್ದಿಲ್ಲ.

Related posts