ಬೆಂಗಳೂರು: ದೇಶದ ಆರ್ಥಿಕ ಕ್ಷೇತ್ರದಲ್ಲಿ ಯಸ್ ಬ್ಯಾಂಕ್ ಹಗರಣ ಭಾರೀ ಸಂಚಲನಕ್ಕೆ ಕಾರಣವಾಗಿರುವಂತೆಯೇ, ಇತ್ತ ರಾಜ್ಯದಲ್ಲಿನ ಸಹಕಾರಿ ಬಾಂಕುಗಳ ಮೇಲೆ ರಾಜ್ಯ ಸರ್ಕಾರ ತೀವ್ರ ನಿಗಾ ವಹಿಸಿದೆ.
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ರಾಜ್ಯದ ಸಹಕಾರಿ ಬ್ಯಾಂಕುಗಳ ಪರಿಸ್ಥಿತಿ ಗಮನಿಸಿರುವ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ರಾಜಕಾರಣಿಗಳತ್ತ ಅಸ್ತ್ರ ಪ್ರಯೋಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಉಮೇದುವಾರರು ತಾವು ಸಹಕಾರ ಸಂಘಗಳಲ್ಲಿ ಸಾಲ ಸುಸ್ತಿದಾರರಲ್ಲ ಎಂಬ ನಿರಾಕ್ಷೇಪಣ ಪತ್ರ ಸಲ್ಲಿಕೆ ಕಡ್ಡಾಯ ಗೊಳಿಸಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದ್ದಾರೆ.
ಹಲವಾರು ರಾಜಕಾರಣಿಗಳು ವಿವಿಧ ಸಹಕಾರ ಬ್ಯಾಂಕ್ಗಳಲ್ಲಿ ಕೋಟ್ಯಂತರ ರೂಪಾಯಿ ಸಾಲ ಪಡೆದು ಸುಸ್ತಿ ದಾರರಾಗಿದ್ದಾರೆ. ಇದರಿಂದಾಗಿ ಅನೇಕ ಬ್ಯಾಂಕುಗಳು ಸಂಕಷ್ಟ ಎದುರಿಸುವಂತಾಗಿದೆ. ಈ ರೀತಿಯ ಹೊಡೆತದಿಂದ ಸಹಕಾರಿ ಬ್ಯಾಂಕುಗಳನ್ನು ಪಾರು ಮಾಡಲು ಈ ನಿಯಮ ಅನಿವಾರಿತವಾಗಬೇಕಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಹಕಾರಿ ಕ್ಷೇತ್ರವನ್ನು ಅಪಾಯದ ಅಂಚಿನಿಂದ ಪಾರಾಗಲು ಕೆಲವು ನಿಷ್ಠುರ ಕ್ರಮ ಅಗತ್ಯವಿದೆ ಎಂದು ಮನಗಂಡಿರುವ ಸಚಿವ ಎಸ್.ಟಿ.ಸೋಮಶೇಖರ್, ರಾಜಕಾರಣಿಗಳಿಗೆ ಪ್ರಹಾರ ನೀಡಲು ಸಜ್ಜಾಗಿರುವುದು ಅಚ್ಚರಿ ಹಾಗೂ ಕುತೂಹಲಕಾರಿ ನಿರ್ಧಾರ ಎಂದೇ ವಿಶ್ಲೇಷಿಸಲಾಗುತ್ತಿದೆ.