ಬೆಂಗಳೂರು: ನೂತನ ಸಚಿವರ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ ವೇಳೆ ಪಕ್ಷದ ಲೆಟರ್ಹೆಡ್ನಲ್ಲೇ ವಿಧಾನಸಭೆ ಸ್ಪೀಕರ್, ಉಪಸಭಾಪತಿ ಹಾಗೂ ವಿಧಾನ ಪರಿಷತ್ ಸಭಾಪತಿ, ಉಪಸಭಾಪತಿ ಹುದ್ದೆಗಳನ್ನೂ ಉಲ್ಲೇಖಿಸಿರುವುದಕ್ಕೆ ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸಾಂವಿಧಾನಿಕ ಹುದ್ದೆಗಳನ್ನು ಪಕ್ಷದ ಲೆಟರ್ಹೆಡ್ನಲ್ಲಿ ಪ್ರದರ್ಶಿಸಿರುವುದು ಅವುಗಳ ಪಕ್ಷಾತೀತ ಸ್ವರೂಪಕ್ಕೆ ಧಕ್ಕೆ ತರುವಂತದ್ದು ಎಂದು ಆರೋಪಿಸಿದ್ದಾರೆ.
“ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು, ಆಚರಣೆಯಲ್ಲಿ ಸಂವಿಧಾನದ ಮೌಲ್ಯಗಳನ್ನೇ ಕಾಂಗ್ರೆಸ್ ಕೊಲೆ ಮಾಡುತ್ತಿದೆ” ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.

ವಿಧಾನಸಭೆಯ ಸ್ಪೀಕರ್, ಉಪಸಭಾಪತಿ ಹಾಗೂ ವಿಧಾನ ಪರಿಷತ್ ಸಭಾಪತಿ ಮತ್ತು ಉಪಸಭಾಪತಿ ಹುದ್ದೆಗಳು ಸಾಂವಿಧಾನಿಕ ಹುದ್ದೆಗಳಾಗಿದ್ದು, ಅವುಗಳಿಗೆ ವಿಶಿಷ್ಟ ಗೌರವ ಮತ್ತು ಘನತೆ ಇದೆ. ಇಂತಹ ಹುದ್ದೆಗಳನ್ನು ಪಕ್ಷಾತೀತವಾಗಿ ಕಾಣುವುದು ಪ್ರಜಾಪ್ರಭುತ್ವದ ಮೂಲಭೂತ ತತ್ವವಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ಕಾಂಗ್ರೆಸ್ ತನ್ನ ಪಕ್ಷದ ಲೆಟರ್ಹೆಡ್ನಲ್ಲಿ ಈ ಹುದ್ದೆಗಳನ್ನು ಪ್ರದರ್ಶಿಸಿರುವುದು ಸಂವಿಧಾನಾತ್ಮಕ ಸಂಪ್ರದಾಯಗಳ ಉಲ್ಲಂಘನೆಯಷ್ಟೇ ಅಲ್ಲ, ಸಾಂವಿಧಾನಿಕ ಹುದ್ದೆಗಳ ಗೌರವಕ್ಕೂ ಅಪಮಾನವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಂವಿಧಾನವನ್ನು ರಕ್ಷಿಸುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್, ತನ್ನ ನಡೆ-ನುಡಿಗಳ ಮೂಲಕವೇ ಸಾಂವಿಧಾನಿಕ ಮೌಲ್ಯಗಳನ್ನು ಕಡೆಗಣಿಸುತ್ತಿದೆ. ಈ ಘಟನೆ ಅದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ಸಿ.ಟಿ. ರವಿ ಹೇಳಿದ್ದಾರೆ.
ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು, ಆಚರಣೆಯಲ್ಲಿ ಸಂವಿಧಾನದ ಮೌಲ್ಯಗಳನ್ನೇ ಕೊಲೆ ಮಾಡುತ್ತಿರುವುದು ಕಾಂಗ್ರೆಸ್.
ವಿಧಾನಸಭೆಯ ಸಭಾಪತಿ, ಉಪಸಭಾಪತಿ ಹಾಗೂ ವಿಧಾನ ಪರಿಷತ್ತಿನ ಸಭಾಪತಿ, ಉಪಸಭಾಪತಿಗಳ ಹುದ್ದೆಗಳು ಸಾಂವಿಧಾನಿಕ ಹುದ್ದೆಗಳಾಗಿದ್ದು, ಅವುಗಳಿಗೆ ವಿಶಿಷ್ಟ ಗೌರವ ಮತ್ತು ಘನತೆ ಇದೆ. ಇಂತಹ ಹುದ್ದೆಗಳನ್ನು ಪಕ್ಷಾತೀತವಾಗಿ… pic.twitter.com/2WcWkBbTHo
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) August 3, 2026

