ಬೆಂಗಳೂರು: ದೆಹಲಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿರುವುದನ್ನು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಂಡಿಸಿದ್ದಾರೆ.
ರಾಜಕೀಯ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಬಲಪ್ರಯೋಗ ನಡೆಸುವುದು ಸರಿಯಲ್ಲ ಎಂದು ಅವರು ‘ಎಕ್ಸ್’ ಮೂಲಕ ಪ್ರತಿಕ್ರಿಯಿಸಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ನಾಯಕರು ಸರ್ಕಾರವನ್ನು ಪ್ರಶ್ನಿಸುವುದು, ಹೊಣೆಗಾರಿಕೆ ಕೇಳುವುದು ಹಾಗೂ ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ವಿಚಾರಗಳ ಕುರಿತು ಉತ್ತರ ಪಡೆಯುವುದು ಅವರ ಪ್ರಜಾಸತ್ತಾತ್ಮಕ ಹಕ್ಕು ಎಂದು ಶಿವಕುಮಾರ್ ಹೇಳಿದ್ದಾರೆ.
“ಸತ್ಯ ನಮ್ಮ ಪರವಾಗಿದೆ. ನಮ್ಮ ಧೈರ್ಯವನ್ನು ನೀವು ಮುರಿಯಲು ಸಾಧ್ಯವಿಲ್ಲ. ಯಾವುದೇ ಶಕ್ತಿಯೂ ನಮ್ಮ ದೃಢಸಂಕಲ್ಪವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಹಾಗೂ ಇತರ ಮಹಿಳಾ ನಾಯಕರೊಂದಿಗೆ ನಡೆದುಕೊಂಡ ರೀತಿಯನ್ನು ಆತಂಕಕಾರಿ ಎಂದು ಬಣ್ಣಿಸಿದ ಅವರು, ಮತದಾರರ ಪಟ್ಟಿ, ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಬಲಪ್ರಯೋಗದ ಬದಲು ಪಾರದರ್ಶಕತೆ ಮತ್ತು ಉತ್ತರಗಳ ಅಗತ್ಯವಿದೆ ಎಂದು ಹೇಳಿದ್ದಾರೆ.
“ಭಿನ್ನಾಭಿಪ್ರಾಯವನ್ನು ದಮನಿಸುವುದರಿಂದ ಪ್ರಜಾಪ್ರಭುತ್ವ ಬಲಗೊಳ್ಳುವುದಿಲ್ಲ. ಅಧಿಕಾರದಲ್ಲಿರುವವರು ಆಲಿಸುವ ಮತ್ತು ಉತ್ತರಿಸುವ ಧೈರ್ಯ ಹೊಂದಿದ್ದಾಗ ಪ್ರಜಾಪ್ರಭುತ್ವ ಬಲಗೊಳ್ಳುತ್ತದೆ” ಎಂದು ಶಿವಕುಮಾರ್ ಹೇಳಿದ್ದಾರೆ.
ಪ್ರತಿಯೊಂದು ಮತದ ಪಾವಿತ್ರ್ಯವನ್ನು ರಕ್ಷಿಸುವುದರ ಜತೆಗೆ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೇಲಿನ ಜನರ ನಂಬಿಕೆಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

