ಸೆ.19ಕ್ಕೆ ತೀರ್ಥಹಳ್ಳಿ, ಬಾಳೆಹೊನ್ನೂರಿಗೆ ಸಿಎಂ ಡಿಕೆಶಿ; ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿ ಹೋರಾಟಗಾರರೊಂದಿಗೆ ಸಂವಾದ

ಶಿವಮೊಗ್ಗ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಮಲೆನಾಡು ಭಾಗದಲ್ಲಿ ರೈತರ ಹೋರಾಟ ತೀವ್ರಗೊಂಡಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸೆ.19ರಂದು ತೀರ್ಥಹಳ್ಳಿ ಹಾಗೂ ಬಾಳೆಹೊನ್ನೂರಿಗೆ ಭೇಟಿ ನೀಡಲಿದ್ದು, ರೈತರೊಂದಿಗೆ ಸಂವಾದ ನಡೆಸಲಿದ್ದಾರೆ.

ಈಗಾಗಲೇ ಮಲೆನಾಡಿನ ವಿವಿಧ ತಾಲೂಕುಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ, ಪಾದಯಾತ್ರೆ ಸೇರಿದಂತೆ ಹಲವು ಹೋರಾಟಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಭೇಟಿ ಮಹತ್ವ ಪಡೆದುಕೊಂಡಿದೆ.

ಸೆ.19ರಂದು ಮಂಗಳೂರಿನಿಂದ ಆಗಮಿಸಲಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಳಗ್ಗೆ 10ರ ಸುಮಾರಿಗೆ ತೀರ್ಥಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸುವ ನಿರೀಕ್ಷೆಯಿದೆ. ಬಳಿಕ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ರೈತರು ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವರದಿ ಜಾರಿಯಿಂದ ಮಲೆನಾಡಿನ ರೈತರು ಹಾಗೂ ಅರಣ್ಯವಾಸಿಗಳಿಗೆ ಎದುರಾಗಬಹುದಾದ ಸಮಸ್ಯೆಗಳು, ಪರಿಸರ ಸಂರಕ್ಷಣೆ ಮತ್ತು ಜನಜೀವನದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಮುಖ್ಯಮಂತ್ರಿಗಳು ಮಾಹಿತಿ ಪಡೆಯುವ ಸಾಧ್ಯತೆಯಿದೆ.

ಮಧ್ಯಾಹ್ನ 1ರ ಸುಮಾರಿಗೆ ಮುಖ್ಯಮಂತ್ರಿ ಬಾಳೆಹೊನ್ನೂರಿಗೆ ತೆರಳಲಿದ್ದು, ಶ್ರೀ ರಂಭಾಪುರಿ ಮಠದ ಆವರಣದಲ್ಲಿರುವ ಹೆಲಿಪ್ಯಾಡ್‌ನಲ್ಲಿ ಇಳಿದು, ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿಯಾದ ಬಳಿಕ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ಸೆ.19ರಂದು ತೀರ್ಥಹಳ್ಳಿಗೆ ಭೇಟಿ ನೀಡಲಿದ್ದಾರೆ. ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಡಾ. ಆರ್.ಎಂ. ಮಂಜುನಾಥ್ ಗೌಡ ನೇತೃತ್ವದಲ್ಲಿ ಭರ್ಜರಿ ಸ್ವಾಗತ ಹಾಗೂ ಅದ್ದೂರಿ ಕಾರ್ಯಕ್ರಮ ಆಯೋಜಿಸುವ ಸಾಧ್ಯತೆಯಿದೆ.

ಕಾರ್ಯಕ್ರಮದ ಅಂತಿಮ ರೂಪುರೇಷೆ ಇನ್ನಷ್ಟೇ ನಿಗದಿಯಾಗಬೇಕಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಇದೇ ವೇಳೆ ಮುಖ್ಯಮಂತ್ರಿ ರಾಮೇಶ್ವರ ದೇವಸ್ಥಾನಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ

Related posts