ಕೈರೋ: ಈಜಿಪ್ಟ್ ರಾಜಧಾನಿ ಕೈರೋ ಸಮೀಪದ ಹೆದ್ದಾರಿಯಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 31 ಮಂದಿ ಮೃತಪಟ್ಟಿದ್ದು, 21 ಜನರು ಗಾಯಗೊಂಡಿದ್ದಾರೆ.
ನವೆಂಬರ್ 25ರಂದು ಗಿಜಾ ಪ್ರಾಂತ್ಯದ ಅಲ್-ವಾರಕ್ ಪ್ರದೇಶದ ರಿಂಗ್ ರೋಡ್ನಲ್ಲಿ ಘಟನೆ ನಡೆದಿದೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಪಲ್ಟಿಯಾದ ಬಳಿಕ ಬೆಂಕಿ ಕಾಣಿಸಿಕೊಂಡಿದ್ದು, ರಸ್ತೆಯಲ್ಲಿದ್ದ ಇತರ ವಾಹನಗಳಿಗೂ ಹರಡಿದೆ. ಕಾರುಗಳು, ಮಿನಿ ಬಸ್ಗಳು ಹಾಗೂ ದ್ವಿಚಕ್ರ ವಾಹನಗಳು ಸೇರಿದಂತೆ ಸುಮಾರು 27 ವಾಹನಗಳು ಸುಟ್ಟುಹೋಗಿವೆ ಎಂದು ವರದಿಯಾಗಿದೆ.

ರಕ್ಷಣಾ ಕಾರ್ಯಾಚರಣೆಗೆ ಅಗ್ನಿಶಾಮಕ ಸಿಬ್ಬಂದಿ ನಿಯೋಜಿಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು 39 ಆಂಬ್ಯುಲೆನ್ಸ್ಗಳನ್ನು ಕಳುಹಿಸಲಾಗಿತ್ತು. ಅಪಘಾತದ ತೀವ್ರತೆಯಿಂದ ಕೆಲವು ಮೃತದೇಹಗಳನ್ನು ಗುರುತಿಸುವುದು ಕಷ್ಟವಾಗಿದ್ದು, ಡಿಎನ್ಎ ಪರೀಕ್ಷೆ ನಡೆಸುವಂತೆ ಸಾರ್ವಜನಿಕ ಅಭಿಯೋಜಕರ ಕಚೇರಿ ಸೂಚಿಸಿದೆ.
ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

