ಬೆಂಗಳೂರು: ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ ಕೋಟ್ಯಂತರ ರೂಪಾಯಿ ಸಾಲ ಮಂಜೂರು ಮಾಡುವ ಮೂಲಕ ಸೌಂದರ್ಯ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ₹10.50 ಕೋಟಿ ನಷ್ಟ ಉಂಟು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಈ ಸಂಬಂಧ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಸತಪ್ಪ ಹೂಗಾರ್ ಎಂಬವರು ನೀಡಿದ ದೂರಿನ ಮೇರೆಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಸೊಸೈಟಿ ಅಧ್ಯಕ್ಷ ಪಿ. ಮಂಜಪ್ಪ ಹಾಗೂ ಎಂ.ಎಸ್. ಸುಬ್ರಹ್ಮಣ್ಯ ಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ ಕಂಪನಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
2018ರಿಂದ 2025ರ ಅವಧಿಯಲ್ಲಿ ಸಾಲ ಮಂಜೂರು ಮಾಡುವ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸೊಸೈಟಿಯಲ್ಲಿ ಸಾವಿರಾರು ಮಂದಿ ಕೋಟ್ಯಂತರ ರೂಪಾಯಿ ಠೇವಣಿ ಇಟ್ಟಿದ್ದಾರೆ. ಈ ಪೈಕಿ ಎಂ.ಎಸ್. ಸುಬ್ರಹ್ಮಣ್ಯ ಕನ್ಸ್ಟ್ರಕ್ಷನ್ ಅಂಡ್ ಡೆವಲಪ್ಮೆಂಟ್ ಕಂಪೆನಿಗೆ ₹7.50 ಕೋಟಿ ಸಾಲ ಮಂಜೂರು ಮಾಡಲಾಗಿತ್ತು. ಆದರೆ, ಸಾಲ ನೀಡುವ ಸಂದರ್ಭದಲ್ಲಿ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸಾಲಕ್ಕೆ ಶ್ಯೂರಿಟಿಯಾಗಿ ನೀಡಿದ್ದ ಜಮೀನಿನ ದಾಖಲೆಗಳು ನಕಲಿ ಎಂಬ ಅನುಮಾನವನ್ನೂ ದೂರುದಾರರು ವ್ಯಕ್ತಪಡಿಸಿದ್ದಾರೆ. ದಾಖಲೆಗಳನ್ನು ಸೂಕ್ತವಾಗಿ ಪರಿಶೀಲಿಸದೆ ಸಾಲ ಮಂಜೂರು ಮಾಡಿರುವುದರಿಂದ ಸೊಸೈಟಿಗೆ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.
ನೆಲಮಂಗಲದಲ್ಲೂ ಪ್ರಕರಣ
ಇದೇ ವೇಳೆ, ಎಚ್.ಬಿ. ಮಂಜುನಾಥ್ ಎಂಬುವವರಿಗೆ ಅಕ್ರಮವಾಗಿ ₹10.56 ಕೋಟಿ ಸಾಲ ಮಂಜೂರು ಮಾಡಿ ಸೊಸೈಟಿಗೆ ನಷ್ಟ ಉಂಟು ಮಾಡಲಾಗಿದೆ ಎಂಬ ಆರೋಪದ ಮತ್ತೊಂದು ಪ್ರಕರಣ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸೊಸೈಟಿ ಸದಸ್ಯ ಎನ್ನಲಾದ ನಿತಿನ್ ಎಂಬವರು ನೀಡಿದ ದೂರಿನ ಮೇರೆಗೆ ಅಧ್ಯಕ್ಷ ಪಿ. ಮಂಜಪ್ಪ ಹಾಗೂ ಮಂಜುನಾಥ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ನಡುವೆ, ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ತನಿಖೆಗೆ ವಿಶೇಷ ತಂಡ ರಚಿಸುವ ಅಥವಾ ಸ್ವತಂತ್ರ ತಂಡಕ್ಕೆ ತನಿಖೆಯನ್ನು ವಹಿಸುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

