ನವದೆಹಲಿ: ಫಿಫಾ ಅಂಡರ್-15 ವಿಶ್ವಕಪ್ ಮತ್ತು ಫೆಸ್ಟಿವಲ್ನಲ್ಲಿ ಭಾರತ ತಂಡ ಕ್ಯೂಬಾ ವಿರುದ್ಧ 6-4 ಗೋಲುಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯಗೊಂಡಿದ್ದು, 189 ರಾಷ್ಟ್ರಗಳ ಪೈಕಿ 87ನೇ ಸ್ಥಾನ ಪಡೆದಿದೆ.
ಕ್ಯೂಬಾ ವಿರುದ್ಧದ ಪಂದ್ಯದಲ್ಲಿ ವಿಕ್ಟರ್ ಲಾಲಾವ್ಮ್ಪುಯಾ, ನಿಬಾಸ್ ಮೀಟೈ ವಹೆಂಗ್ಬಾಮ್ ಮತ್ತು ಆರ್. ಲಾಲ್ರೆಮ್ರುಯಾಟ್ಫೆಲಾ ತಲಾ ಎರಡು ಗೋಲು ಗಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಟೂರ್ನಿಯಲ್ಲಿ ಭಾರತ ಒಟ್ಟು ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಒಂದು ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.
ಆರಂಭಿಕ ಫಿಫಾ ಅಂಡರ್-15 ವಿಶ್ವಕಪ್ ಮತ್ತು ಫೆಸ್ಟಿವಲ್ನಲ್ಲಿ ಭಾರತದ ಯುವ ಆಟಗಾರರು ಗಮನಾರ್ಹ ಪ್ರದರ್ಶನ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

