ನವದೆಹಲಿ: ಫಿನ್‌ಲ್ಯಾಂಡ್‌ನ ಟ್ಯಾಂಪರೆಯಲ್ಲಿ ನಡೆದ 46ನೇ ಅಂತರರಾಷ್ಟ್ರೀಯ ಟ್ಯಾಮರ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತೀಯ ಬಾಕ್ಸರ್‌ಗಳು ಒಟ್ಟು 14 ಪದಕಗಳನ್ನು ಗೆಲ್ಲುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.
ಭಾರತ ನಾಲ್ಕು ಚಿನ್ನ, ಎರಡು ಬೆಳ್ಳಿ ಹಾಗೂ ಎಂಟು ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಮಹಿಳೆಯರ ವಿಭಾಗದಲ್ಲಿ ಆರತಿ ಧರಿಯಾಲ್ (54 ಕೆಜಿ), ಅಂಕುಶಿತಾ ಬೋರೋ (65 ಕೆಜಿ), ಅರುಂಧತಿ ಚೌಧರಿ (70 ಕೆಜಿ) ಹಾಗೂ ಪುರುಷರ ವಿಭಾಗದಲ್ಲಿ ಪವನ್ ಬರ್ತ್ವಾಲ್ (55 ಕೆಜಿ) ಚಿನ್ನದ ಪದಕ ಗೆದ್ದರು.

ಮೊಹಮ್ಮದ್ ಹುಸಾಮುದ್ದೀನ್ (ಪುರುಷರ 60 ಕೆಜಿ) ಮತ್ತು ಜೈಸ್ಮಿನ್ (ಮಹಿಳೆಯರ 57 ಕೆಜಿ) ಬೆಳ್ಳಿ ಪದಕ ಪಡೆದರು.
ಕಂಚಿನ ಪದಕ ವಿಜೇತರಾದ ವಿವೇಕ್ ಮೀನಾ (65 ಕೆಜಿ), ಹಿತೇಶ್ (70 ಕೆಜಿ), ಅಕ್ಷಯ್ (80 ಕೆಜಿ), ಬೋಬಿನ್ ಚೌಹಾಣ್ (90 ಕೆಜಿ), ಚೇತನ್ ಚೌಧರಿ (90+ ಕೆಜಿ), ತನು (ಮಹಿಳೆಯರ 51 ಕೆಜಿ), ದಿಶಾ ಪಾಟೀಲ್ (60 ಕೆಜಿ) ಮತ್ತು ಇಮ್ರೋಜ್ ಖಾನ್ (75 ಕೆಜಿ) ಭಾರತಕ್ಕೆ ಮತ್ತಷ್ಟು ಪದಕಗಳನ್ನು ತಂದುಕೊಟ್ಟರು.

