ನವದೆಹಲಿಯನ ಬ್ರಿಕ್ಸ್ ಸಂಸದೀಯ ಸಮಾವೇಶದಿಂದ ಇರಾನ್ ದೂರ

ನವದೆಹಲಿ: ನವದೆಹಲಿಯಲ್ಲಿ ನಡೆಯಲಿರುವ 12ನೇ ಬ್ರಿಕ್ಸ್ ಸಂಸದೀಯ ವೇದಿಕೆಯಲ್ಲಿ ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್-ಬಾಕರ್ ಖಲೀಬಾಫ್ ಭಾಗವಹಿಸುವುದಿಲ್ಲ ಎಂದು ಇರಾನ್ ರಾಯಭಾರ ಕಚೇರಿ ತಿಳಿಸಿದೆ.

ಅನಿರೀಕ್ಷಿತ ಸಂದರ್ಭಗಳಿಂದಾಗಿ ಸ್ಪೀಕರ್ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ರಾಯಭಾರ ಕಚೇರಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ಆದರೆ, ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಂಸತ್ತಿನ ಸ್ಪೀಕರ್‌ಗಳ ಸಭೆಯಲ್ಲಿ ಇರಾನ್ ಸಂಸದೀಯ ನಿಯೋಗ ಭಾಗವಹಿಸಲಿದೆ ಎಂದು ತಿಳಿಸಿದೆ.

ಬ್ರಿಕ್ಸ್ ಶೃಂಗಸಭೆಗಳು ಮತ್ತು ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇರಾನ್‌ನ ಬದ್ಧತೆಯನ್ನು ಪುನರುಚ್ಚರಿಸಿರುವ ರಾಯಭಾರ ಕಚೇರಿ, ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಇತರ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸಂವಾದ ಮತ್ತು ಸಮಾಲೋಚನೆಗಳನ್ನು ಮುಂದುವರಿಸುವುದಾಗಿ ಹೇಳಿದೆ.

ಸಭೆಯನ್ನು ಆಯೋಜಿಸಲು ಕೈಗೊಂಡ ವ್ಯವಸ್ಥೆಗಳು ಹಾಗೂ ಆತಿಥ್ಯಕ್ಕಾಗಿ ಭಾರತ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿರುವ ಇರಾನ್ ರಾಯಭಾರ ಕಚೇರಿ, ವೇದಿಕೆಯ ಚರ್ಚೆಗಳು ರಚನಾತ್ಮಕ ಫಲಿತಾಂಶಗಳನ್ನು ನೀಡಲಿವೆ ಮತ್ತು ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.

Related posts