ಬೆಂಗಳೂರು: ಪಶ್ಚಿಮಘಟ್ಟಗಳ ಪರಿಸರ ಸಂರಕ್ಷಣೆಯ ಜತೆಗೆ ಅಲ್ಲಿನ ರೈತರು, ತೋಟಗಾರರು, ಆದಿವಾಸಿಗಳು ಹಾಗೂ ಸ್ಥಳೀಯ ಜನರ ಹಕ್ಕು ಮತ್ತು ಜೀವನೋಪಾಯವನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕಸ್ತೂರಿರಂಗನ್ ವರದಿ ಕುರಿತು ಚರ್ಚೆಯಲ್ಲಿ ಮಾತನಾಡಿದ ಅವರು, “ಪರಿಸರವೂ ಉಳಿಯಬೇಕು, ಜನರ ಬದುಕೂ ಉಳಿಯಬೇಕು. ಪಶ್ಚಿಮಘಟ್ಟಗಳ ಸಂರಕ್ಷಣೆ ಹಾಗೂ ಅಲ್ಲಿನ ಜನರ ಹಕ್ಕು–ಜೀವನೋಪಾಯದ ರಕ್ಷಣೆ ಎರಡೂ ಸಮತೋಲನದಿಂದ ಸಾಗಬೇಕು” ಎಂದರು.
20,668 ಚ.ಕಿ.ಮೀ ಪ್ರದೇಶ ESA ವ್ಯಾಪ್ತಿಗೆ
ಕೇಂದ್ರ ಸರ್ಕಾರ ಜುಲೈ 27ರಂದು ಹೊರಡಿಸಿರುವ 7ನೇ ಕರಡು ಅಧಿಸೂಚನೆಯಲ್ಲಿ ಪಶ್ಚಿಮಘಟ್ಟದ ಆರು ರಾಜ್ಯಗಳ ಒಟ್ಟು 56,825.7 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA)ವಾಗಿ ಗುರುತಿಸಲು ಪ್ರಸ್ತಾಪಿಸಲಾಗಿದೆ. ಕರ್ನಾಟಕದ 10 ಜಿಲ್ಲೆಗಳ 1,449 ಗ್ರಾಮಗಳ ಸುಮಾರು 20,668 ಚ.ಕಿ.ಮೀ ಪ್ರದೇಶವೂ ಇದರಲ್ಲಿ ಸೇರಿದೆ ಎಂದು ಸಚಿವರು ತಿಳಿಸಿದರು.
ಇದು ಇನ್ನೂ ಕರಡು ಹಂತದಲ್ಲಿದ್ದು, ಆಕ್ಷೇಪಣೆ ಮತ್ತು ಸಲಹೆ ಸಲ್ಲಿಸಲು ಅವಕಾಶವಿದೆ. ಸೆಪ್ಟೆಂಬರ್ 3ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕರಡು ಅಧಿಸೂಚನೆಯನ್ನು ಪ್ರಸ್ತುತ ರೂಪದಲ್ಲಿ ತಿರಸ್ಕರಿಸಲು ನಿರ್ಧರಿಸಿ, ಕೇಂದ್ರಕ್ಕೆ ರಾಜ್ಯದ ನಿಲುವು ತಿಳಿಸಲಾಗಿದೆ ಎಂದರು.

ಕೃಷಿ ಜಮೀನು, ತೋಟಗಾರಿಕೆ ಪ್ರದೇಶ, ಮನೆಗಳು ಮತ್ತು ಜನವಸತಿ ಪ್ರದೇಶಗಳು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಸೇರುವ ಸಾಧ್ಯತೆಯ ಬಗ್ಗೆ ಸ್ಥಳೀಯರಲ್ಲಿ ಆತಂಕವಿದೆ. ಹೀಗಾಗಿ ಗ್ರಾಮ ಹಾಗೂ ಸರ್ವೆ ನಂಬರ್ ಮಟ್ಟದಲ್ಲಿ ಭೌತಿಕ ಸಮೀಕ್ಷೆ ನಡೆಸಿ ನೈಸರ್ಗಿಕ ಅರಣ್ಯ, ಕೃಷಿ, ತೋಟಗಾರಿಕೆ, ಜನವಸತಿ ಹಾಗೂ ಜಲಮೂಲ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕು ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕೇವಲ ನಕ್ಷೆ ಅಥವಾ ಉಪಗ್ರಹ ಆಧಾರದ ಬದಲು ಸ್ಥಳೀಯ ವಾಸ್ತವಾಂಶ ಪರಿಶೀಲನೆ ಅಗತ್ಯ. ಗ್ರಾಮಗಳ ನಕ್ಷೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಸ್ವೀಕರಿಸಿ ಅಂತಿಮಗೊಳಿಸುವ ವ್ಯವಸ್ಥೆ ರೂಪಿಸುವ ಅಗತ್ಯವಿದೆ ಎಂದರು.
ಪರಿಸರ ಸಂರಕ್ಷಣೆ ಹೆಸರಿನಲ್ಲಿ ಸ್ಥಳೀಯ ಜನರ ಕೃಷಿ, ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಅನಗತ್ಯ ಅಡ್ಡಿಯಾಗಬಾರದು. ಮನೆ, ರಸ್ತೆ, ಶಾಲೆ, ಆಸ್ಪತ್ರೆ, ಕುಡಿಯುವ ನೀರು ಮತ್ತು ವಿದ್ಯುತ್ ಸೇರಿದಂತೆ ಮೂಲ ಸೌಲಭ್ಯಗಳಿಗೆ ಸ್ಪಷ್ಟ ಮಾರ್ಗಸೂಚಿ ಇರಬೇಕು ಎಂದರು.
ಅದೇ ವೇಳೆ ಅಕ್ರಮ ಗಣಿಗಾರಿಕೆ, ಮರಳು ಗಣಿಗಾರಿಕೆ, ಮಿತಿಮೀರಿದ ಗುಡ್ಡಕಡಿತ, ಒತ್ತುವರಿ ಹಾಗೂ ಹೆಚ್ಚಿನ ಮಾಲಿನ್ಯ ಉಂಟುಮಾಡುವ ಚಟುವಟಿಕೆಗಳಿಗೆ ಯಾವುದೇ ರಕ್ಷಣೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರಕ್ಕೆ ಹಲವು ಸಲಹೆ
ಕೇಂದ್ರ ಸರ್ಕಾರದೊಂದಿಗೆ ಮುಂದಿನ ಚರ್ಚೆಗಳಲ್ಲಿ ರಾಜ್ಯದ ಆಕ್ಷೇಪಣೆಗಳನ್ನು ಸಲ್ಲಿಸುವುದು, ಗ್ರಾಮ–ಸರ್ವೆ ನಂಬರ್ ಮಟ್ಟದ ನಕ್ಷೆ ಸಿದ್ಧಪಡಿಸುವುದು, ಸ್ಥಳೀಯರ ಆಕ್ಷೇಪಣೆ ಪಡೆಯುವುದು ಹಾಗೂ ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಜನವಸತಿ–ಕೃಷಿ ಪ್ರದೇಶಗಳನ್ನು ಪ್ರತ್ಯೇಕಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಪಶ್ಚಿಮಘಟ್ಟ ಸಂರಕ್ಷಣೆಗೆ ಕೇಂದ್ರದಿಂದ ವಿಶೇಷ ಆರ್ಥಿಕ ನೆರವು, ಜಲಮೂಲ ಸಂರಕ್ಷಣೆ, ಭೂಕುಸಿತ ತಡೆ, ಅರಣ್ಯ ಪುನರುಜ್ಜೀವನ ಮತ್ತು ಪರ್ಯಾಯ ಜೀವನೋಪಾಯಕ್ಕೆ ಬೆಂಬಲ ಅಗತ್ಯ ಎಂದು ಸಚಿವರು ಹೇಳಿದರು.
“ಇದು ಯಾವುದೇ ಒಂದು ಪಕ್ಷದ ವಿಷಯವಲ್ಲ. ಪಶ್ಚಿಮಘಟ್ಟಗಳ ಪರಿಸರ, ಜಲಸುರಕ್ಷತೆ ಹಾಗೂ ಅಲ್ಲಿನ ಜನರ ಭವಿಷ್ಯಕ್ಕೆ ಸಂಬಂಧಿಸಿದ ವಿಷಯ. ಹೀಗಾಗಿ ಪಕ್ಷಾತೀತವಾಗಿ ಒಗ್ಗಟ್ಟಿನ ನಿಲುವು ಅಗತ್ಯ” ಎಂದು ರಾಮಲಿಂಗಾರೆಡ್ಡಿ ಹೇಳಿದರು.

