ಖಾಸಗಿ ಕಂಪೆನಿ ಉದ್ಯೋಗಿಗಳಿಗೆ ಶಾಕ್..!! ಲಾಕ್’ಡೌನ್’ನಿಂದ ಜೇಬಿಗಷ್ಟೇ ಅಲ್ಲ, ಜಾಬಿಗೂ ಕತ್ತರಿ..

ಕೊರೋನಾ ಹಾವಳಿಯಿಂದಾಗಿ ಒಂದೆಡೆ ಜೇಬಿಗೆ ಕತ್ತರಿ ಬೀಳುವಂತಾದರೆ ಇನ್ನೂ ಕೆಲವರ ಜಾಬಿಗೂ ಕತ್ತರಿ ಬೀಳುವಂತಾಗಿದೆ

ಬೆಂಗಳೂರು: ಕೊರೋನಾ ಕಾರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು ಬಹುತೇಕ ಕಂಪೆನಿಗಳು ಈ ಪರಿಸ್ಥಿಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುವ ಸಂಚು ರೂಪಿಸುತ್ತಿವೆ.

ಲಾಕ್ ಡೌನ್ ಎಫೆಕ್ಟ್ ಐಟಿ ಕಂಪೆನಿಗಳಿಗೆ ಎಷ್ಟು ಹೊಡೆತ ನೀಡಿದೆಯೋ ಗೊತ್ತಿಲ್ಲ. ಆದರೆ ಪ್ರಸ್ತುತ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ಯಾವುದೇ ಕಂಪೆನಿಗಳು, ಕಚೇರಿಗಳು ಓಪನ್ ಇಲ್ಲ. ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಂ ಅವಕಾಶ ಕಲ್ಪಿಸಲಾಗಿದೆ. ಈ ಸಂದರ್ಭದಲ್ಲಿ ಕೆಲ ಕಂಪೆನಿಗಳು ಉದ್ಯೋಗಿಗಳನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ಆರಂಭಿಸಿದೆ.

ಈ ಕುರಿತಂತೆ ಕಂಪೆನಿಯೊಂದರ ಮಹಿಳಾ ಉದ್ಯೋಗಿಯೊಬ್ಬರು ಮಾಡಿರುವ ಟ್ವೀಟ್ ಐಟಿ ಕ್ಷೇತ್ರದಲ್ಲಿ ಸಂಚಲನ ಉಂಟು ಮಾಡಿದೆ.

‘ನಾನು ಬೆಳ್ಳಂದೂರು ರಸ್ತೆ ಎಕೋಸ್ಪೇಸ್‍ನಲ್ಲಿರುವ ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಇತ್ತೀಚೆಗೆ ‘ವರ್ಕ್ ಫ್ರಂ ಹೋಮ್’ ಮಾಡುತ್ತಿದ್ದ ಮತ್ತು ನನ್ನ ಬ್ಯಾಚ್‍ನಲ್ಲಿದ್ದ 15 ಮಂದಿಯನ್ನು ಕಂಪನಿ ಯಾವುದೇ ಕಾರಣ ನೀಡದೇ ಕೆಲಸದಿಂದ ವಜಾಗೊಳಿಸಿದೆ’ ಎಂದು ನೊಂದ ಟೆಕ್ಕಿಯೊಬ್ಬರು ಪತ್ರವನ್ನು ಬರೆದು ಟ್ವೀಟ್ ಮಾಡಿದ್ದಾರೆ. ಮಾಧ್ಯಮಗಳು ಹಾಗೂ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಅವರಿಗೂ ಟ್ಯಾಗ್ ಮಾಡಿ ಗಮನಸೆಳೆಯುವಂತೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೂ ಟ್ಯಾಗ್ ಮಾಡಿ ದಯವಿಟ್ಟು ನಮ್ಮ ಸಹಾಯಕ್ಕೆ ಬನ್ನಿ ಎಂದು ಈ ಟೆಕ್ಕಿ ಸಹಾಯ ಯಾಚಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಸಿರುವ ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್, ‘ನಿಮ್ಮದು ಐಟಿ ಕಂಪನಿ ಆಗಿದ್ದರೆ ನೀವು ಕಾರ್ಮಿಕ ವರ್ಗಕ್ಕೆ ಸೇರುವುದಿಲ್ಲ. ಆಗ ನೀವು ಸಂಸ್ಥೆಯ ಒಪ್ಪಂದ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ ಎಂದು ಸಲಹೆ ಮಾಡಿದ್ದಾರೆ. ಸ್ಥಳೀಯ ಕಾರ್ಮಿಕ ಅಧಿಕಾರಿಯ ಗಮನಕ್ಕೆ ತಂದರೆ ಅವರಾರು ನಿಯಮಾನುಸಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದೂ ಮಾರ್ಗದರ್ಶನ ಮಾಡಿದ್ದಾರೆ.

https://twitter.com/mani1972ias/status/1248464753892061186

ಈ ಟ್ವೀಟ್ ಔದ್ಯೋಗಿಕ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ್ದು ಭಾರೀ ಚರ್ಚೆ ಸಾಗಿದೆ. ಇದೆ ರೀತಿ ಬಹುತೇಕ ಕಂಪೆನಿಗಳು ಉದ್ಯೋಗ ಕಡಿತದ ಕ್ರಮಕ್ಕೆ ಮುಂದಾದರೆ ನೌಕರರ ಪರಿಸ್ಥಿತಿ ಹೇಗಾಗಬಹುದು ಎಂಬ ಪ್ರಶ್ನೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ.. ಕೊರೋನಾ ಸೋಂಕಿತರು ಹತ್ತಿರ ಬಂದರೆ ಅಲಾರ್ಮ್: ಇಲ್ಲಿದೆ ನೋಡಿ ಮೊಬೈಲ್ ಆ್ಯಪ್ ವಿಶೇಷ. 

 

Related posts