ನಿಖಿಲ್-ರೇವತಿ ಕಲ್ಯಾಣೋತ್ಸವ; ಲಾಕ್’ಡೌನ್ ನಡುವೆ ಸರಳ ವಿವಾಹ

ರಾಮನಗರ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ವಂಶದ ಕುಡಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ವಿವಾಹ ಇಂದು ನೆರವೇರಿತು. ನಿಖಿಲ್-ರೇವತಿ ಕಲ್ಯಾಣೋತ್ಸವದಲ್ಲಿ ಸಂಬಂಧಿಕರು ಹಾಗೂ ತೀರಾ ಆಪ್ತರಷ್ಟೇ ಪಾಲ್ಗೊಂಡಿದ್ದರು.


ಕೊರೋನಾ ವೈರಸ್ ಲಾಕ್’ಡೌನ್ ನಡುವೆಯೇ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಹಾಗೂ ರೇವತಿ ಅವರ ವಿವಾಹ ಸರಳವಾಗಿ ನೆರವೇರಿದೆ. ರಾಮನಗರ ಜಿಲ್ಲೆ ಕೇತಗಾನಹಳ್ಳಿಯಲ್ಲಿರುವ ಕುಮಾರಸ್ವಾಮಿಯವರ ತೋಟದ ಮನೆಯನ್ನು ಈ ವಿವಾಹ ಸಮಾರಂಭಕ್ಕಾಗಿ ಸಜ್ಜುಗೊಳಿಸಲಾಗಿತ್ತು. ವರನ ತಂದೆ ತಾಯಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ಹಾಗೂ ವಧುವಿನ ಹೆತ್ತವರಾದ ಮಂಜುನಾಥ ದಂಪತಿ ಉಪಸ್ಥಿತಿಯಲ್ಲಿ ಎಚ್.ಡಿ.ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಮದುವೆಯ ಸಂಪ್ರದಾಯವನ್ನು ನೆರವೇರಿಸಿದರು.

ಸಿನಿಮಾ ನಟರೂ ಆಗಿರುವ ನಿಖಿಲ್ ಅವರ ವಿವಾಹವನ್ನು ಅದ್ದೂರಿಯಾಗಿ ನೆರವೇರಿಸಲು ಕುಮಾರಸ್ವಾಮಿಯವರು ನಿರ್ಧರಿಸಿದ್ದರು. ಈ ಸಂಬಂಧ ಹಲವು ತಿಂಗಳುಗಳಿಂದ ಸಿದ್ದತಾ ಪ್ರಕ್ರಿಯೆ ಸಾಗಿತ್ತು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಲಾಕ್’ಡೌನ್ ಜಾರಿಯಲ್ಲಿರುವುದರಿಂದಾಗಿ ಅತ್ಯಂತ ಸರಳವಾಗಿ ವಿವಾಹ ಸಮಾರಂಭ ನೆರವೇರಿಸಲಾಗಿದೆ.

ಶಾಸಕರಾಗಲೀ ಸಂಸದರಾಗಲೀ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ.

Related posts