ಸಂಸತ್ತಿನ ಉಭಯ ಸದನಗಳ ಕಲಾಪ ಪುನರಾರಂಭಕ್ಕೆ ಕೇಂದ್ರ ಸರ್ಕಾರ ನಿರ್ಧಾರ!

ನವದೆಹಲಿ: ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಮತ್ತೆ ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನವೆಂಬರ್ 30ರಂದು ಲೋಕಸಭೆ ಹಾಗೂ ಡಿಸೆಂಬರ್ 2ರಂದು ರಾಜ್ಯಸಭೆ ಕಲಾಪ ಪುನರಾರಂಭವಾಗಲಿದೆ. ಅಗತ್ಯ ಸರ್ಕಾರಿ ಕಾರ್ಯಕಲಾಪಗಳನ್ನು ಕೈಗೆತ್ತಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಗೂ ರಾಜ್ಯಸಭಾ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ ಕಲಾಪ ಪುನರಾರಂಭಿಸುವಂತೆ ಸರ್ಕಾರ ಮನವಿ ಸಲ್ಲಿಸಿದೆ ಎಂದು ಹೇಳಿದ್ದಾರೆ. ಕಲಾಪದ ಕಾರ್ಯಸೂಚಿಗೆ ಅನುಗುಣವಾಗಿ ಡಿಸೆಂಬರ್ 3ರಂದು ಉಭಯ ಸದನಗಳ ಕಲಾಪ ಮುಕ್ತಾಯಗೊಳ್ಳುವ ಸಾಧ್ಯತೆಯಿದೆ. ಈ ಕಲಾಪ ಮುಂಗಾರು ಅಧಿವೇಶನದ ಮುಂದುವರಿದ ಭಾಗವಾಗಿರಲಿದೆ.

ಇನ್ನು ಕ್ಷೇತ್ರ ಪುನರ್‌ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ವಿಧೇಯಕಗಳ ವಿಚಾರ ಕುತೂಹಲ ಮೂಡಿಸಿದೆ. ಮಹಿಳಾ ಮೀಸಲಾತಿ ಕಾಯ್ದೆಯನ್ನು ಜನಗಣತಿ ಮತ್ತು ಕ್ಷೇತ್ರ ಪುನರ್‌ವಿಂಗಡಣೆಯಿಂದ ಪ್ರತ್ಯೇಕಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ. ಅಲ್ಲದೆ, ರಾಜ್ಯವಾರು ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಯಥಾಸ್ಥಿತಿಯಲ್ಲಿ ಉಳಿಸಿ, ಪ್ರಸ್ತುತ 543 ಸ್ಥಾನಗಳಲ್ಲಿ 182 ಸ್ಥಾನಗಳನ್ನು ಮಹಿಳೆಯರಿಗೆ ತಕ್ಷಣ ಮೀಸಲಿಡುವಂತೆ ಒತ್ತಾಯಿಸಿದೆ.

Related posts