ಬೈಂದೂರು: ದೇವಸ್ಥಾನದ ಸುತ್ತಮುತ್ತಲ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ ಎನ್ನಲಾದ ಗೋ ಕಳ್ಳತನವನ್ನು ಖಂಡಿಸಿ ಹಾಗೂ ಗೋಹತ್ಯೆ ಮತ್ತು ಗೋ ಕಳ್ಳತನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಸಂರಕ್ಷಣಾ ಸಮಿತಿ, ಬೈಂದೂರು ತಾಲೂಕು ಚಿತ್ತೂರು ಘಟಕದ ನೇತೃತ್ವದಲ್ಲಿ ಭವ್ಯ ಪಾದಯಾತ್ರೆ ಹಾಗೂ ಜನಾಗ್ರಹ ಸಭೆ ನಡೆಯಿತು.
“ಕಾಮಧೇನುವಿನ ರಕ್ಷಣೆ ನಮ್ಮೆಲ್ಲರ ಹೊಣೆ” ಮತ್ತು “ಭಕ್ತರ ನಡೆ ಬ್ರಹ್ಮಲಿಂಗನ ಕಡೆ” ಎಂಬ ಧ್ಯೇಯವಾಕ್ಯಗಳೊಂದಿಗೆ ಚಿತ್ತೂರು ಸರ್ಕಲ್ನಿಂದ ಪಾದಯಾತ್ರೆ ಆರಂಭವಾಯಿತು. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ಸನ್ನಿಧಿಯವರೆಗೆ ಸಾಗಿದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದವರು ಗೋ ರಕ್ಷಣೆ ಪರ ಘೋಷಣೆಗಳನ್ನು ಕೂಗಿದರು. ಗೋ ಕಳ್ಳತನ ಮತ್ತು ಗೋಹತ್ಯೆ ಪ್ರಕರಣಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪಾದಯಾತ್ರೆಯ ಬಳಿಕ ಮಾರಣಕಟ್ಟೆಯಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಆದರ್ಶ್ ಕೇಲ, ಹಿಂದೂ ಜಾಗರಣ ವೇದಿಕೆ ಬೈಂದೂರು ತಾಲೂಕು ಸಂಯೋಜಕ ಹರೀಶ್ ಸಲ್ಕೋಡ್ ಹಾಗೂ ಶ್ರೀನಿವಾಸ್ ಮಂಜರು ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು. ಗೋಹತ್ಯೆ ಮತ್ತು ಗೋ ಕಳ್ಳತನದ ಕುರಿತು ಜಾಗೃತಿ ಮೂಡಿಸುವ ಅಗತ್ಯವನ್ನು ಅವರು ಪ್ರತಿಪಾದಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಹಾಗೂ ಭಕ್ತರು ಸಭೆಯಲ್ಲಿ ಪಾಲ್ಗೊಂಡರು. ಸಾವಿರಾರು ಮಂದಿ ಭಾಗವಹಿಸಿ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿದರು.

